ಬಳ್ಳಾರಿಯಲ್ಲಿ ನಡೆದ ಬಾಣಂತಿಯರ ಸರಣಿ ಸಾವಿನ ಬಗ್ಗೆ ಕೊನೆಗೂ ಆರೋಗ್ಯ ಮಂತ್ರಿ ದಿನೇಶ್ ಗುಂಡೂರಾವ್ ತನಿಖೆಗಾಗಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸುವುದಾಗಿ ಘೋಷಣೆ ಮಾಡಿದ್ದಾರೆ. ಇಷ್ಟು ದಿನ ಸೋಗಲಾಡಿತನ ಮಾಡುತ್ತಿದ್ದ ಆರೋಗ್ಯ ಸಚಿವರು, ನಿನ್ನೆ ಮುಖ್ಯಮಂತ್ರಿಗಳು ಚಾಟಿ ಬೀಸಿದ ನಂತರ ಸ್ವಲ್ಪ ಎಚ್ಚೆತ್ತಗೊಂಡಿರುವ ಹಾಗೆ ಕಾಣುತ್ತಿದೆ. ಇದೀಗ ತನಿಖಾ ಸಮಿತಿಯೊಂದನ್ನು ರಚನೆ ಮಾಡಿದ ದಿನೇಶ್ ಗುಂಡೂರಾವ್ 'ಸರ್ಕಾರ ಬಾಣಂತಿಯರ ಸಾವುಗಳನ್ನು ಗಂಭೀರವಾಗಿ ಪರಿಗಣಿಸಿದೆ. ಈ ಸಮಿತಿ ನೀಡುವ ವರದಿಯ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ' ಎಂದು ತಿಳಿಸಿದ್ದಾರೆ. ಶನಿವಾರ ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಆರೋಗ್ಯ ಸಚಿವರು ಸುದ್ದಿಗೋಷ್ಠಿಯಲ್ಲಿ ಈ ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ವೈದ್ಯರ ಬೇಜಾವಾಬ್ದಾರಿಯಿಂದ ಮೃತಪಟ್ಟ ಬಾಣಂತಿಯರ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡುವುದಾಗಿಯೂ ತಿಳಿಸಿದರು.