ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ನಡೆದ ಎರಡನೇ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡ ಅವಮಾನಕರ ರೀತಿಯಲ್ಲಿ ಸೋತು ಶರಣಾಗಿದೆ. ಎರಡೂ ಇನ್ನಿಂಗ್ಸ್ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ ತಂಡವನ್ನು ಆಸ್ಟ್ರೇಲಿಯಾ ಹತ್ತು ವಿಕೆಟ್ ಅಂತರದಿAದ ಸುಲಭವಾಗಿ ಸೋಲಿಸಿ ಸರಣಿಯನ್ನು ಸಮಬಲ ಮಾಡಿಕೊಂಡಿದೆ. ಮೂರನೇ ದಿನದಲ್ಲಿ ಭಾರತ ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ ೧೭೫ ರನ್‌ಗಳಿಗೆ ಆಲ್‌ಔಟ್ ಆಗಿ ಆಸ್ಟ್ರೇಲಿಯಾಗೆ ಗೆಲ್ಲುವುದಕ್ಕೆ ಕೇವಲ ೧೯ ರನ್‌ಗಳ ಗುರಿ ನೀಡಿತ್ತು. ಆಸ್ಟ್ರೇಲಿಯಾ ಯಾವುದೇ ವಿಕೆಟ್ ಕಳೆದುಕೊಳ್ಳದೆ ಮೂರು ಓವರ್‌ಗಳಲ್ಲಿ ಗೆಲುವಿನ ಗುರಿಯನ್ನು ತಲುಪಿತು. ಈ ಟೆಸ್ಟ್ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ನಲ್ಲಿ ನಿತೀಶ್ ಕುಮಾರ್ ರೆಡ್ಡಿ ನಲವತ್ತಕ್ಕಿಂತ ಅಧಿಕ ಸ್ಕೋರ್ ಗಳಿಸಿದ್ದೇ ಹೆಚ್ಚು ರನ್ ಆಗಿತ್ತು. ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿಯಂಥ ದಿಗ್ಗಜ ಆಟಗಾರರು ಎರಡೂ ಇನ್ನಿಂಗ್ಸ್ನಲ್ಲಿ ಕ್ರಿಕೆಟ್ ಆಟವನ್ನೇ ಮರೆತವರ ಹಾಗೆ ಬೇಜವಾಬ್ದಾರಿಯಿಂದ ಆಡಿದ್ದು ಬೇಗನೆ ಟೆಸ್ಟ್ ಕ್ರಿಕೆಟ್‌ನಿಂದಲೂ ನಿವೃತ್ತಿ ಪಡೆಯುವ ಮುನ್ಸೂಚನೆಯಾಗಿ ಕಂಡಿದೆ. ಮೂರೇ ದಿನಕ್ಕೆ ಮುಕ್ತಾಯವಾದ ಈ ಟೆಸ್ಟ್ನಲ್ಲಿ ಎರಡೂ ಇನ್ನಿಂಗ್ಸ್ನಲ್ಲಿ ಒಬ್ಬ ಭಾರತೀಯ ದಾಂಡಿಗನೂ ಅರ್ಧ ಶತಕ ಗಳಿಸಲಿಲ್ಲ ಅನ್ನುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ನಿರಾಸೆ ಹಾಗೂ ಬೇಸರ ಮೂಡಿಸಿತು.