ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ.
ರೂ.1,274 ಕೋಟಿ ವೆಚ್ಚದಲ್ಲಿ ವಾಣಿ ವಿಲಾಸ ಸಾಗರ ಜಲಾಶಯ ನಾಲಾ ಆಧುನೀಕರಣ

ಚಿತ್ರದುರ್ಗ : ವಾಣಿವಿಲಾಸ ಸಾಗರ ಜಲಾಶಯದ ನಾಲೆಗಳನ್ನು 1,274 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ ಮಾಡುವ ಯೋಜನೆ ರೂಪಿಸಲಾಗಿದ್ದು, ಶೀಘ್ರವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ವಾಣಿವಿಲಾಸ ಸಾಗರ ಜಲಾಶಯವು ಭರ್ತಿಯಾದ ಹಿನ್ನಲೆಯಲ್ಲಿ ಜಲಾಶಯಕ್ಕೆ ಗುರುವಾರ ಗಂಗಾಪೂಜೆ ಮತ್ತು ಬಾಗಿನ ಸಮರ್ಪಣೆ ನೆರವೇರಿಸಿದ ಅವರು, ನಂತರ ವಿ.ವಿ.ಪುರ ಗ್ರಾಮದ ಶಾಲಾ ಆವರಣದಲ್ಲಿ ಆಯೋಜಿಸಲಾದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಜಲಾಶಯ ನಿರ್ಮಾಣ ವೇಳೆ ನಿರ್ಮಿಸಿದ 129 ಕಿ.ಮೀ. ಉದ್ದದ ನಾಲೆಗಳು ಇಂದು ಕಿರಿದಾಗಿವೆ. ನಾಲಾ ಆಧುನೀಕರಣ ಕಾಮಗಾರಿಯಿಂದ ನಾಲೆಯ ಕೊನೆ ಭಾಗದ ರೈತರ ಜಮೀನುಗಳಿಗೂ ನೀರು ಲಭಿಸಲಿದೆ. 2022 ರಲ್ಲಿ ಜಲಾಶಯ ಭರ್ತಿಯಾದ ಸಂದರ್ಭದಲ್ಲಿ ಹೊಸದುರ್ಗ ತಾಲ್ಲೂಕಿನ ರೈತರ ಜಮೀನು ಹಿನ್ನೀರಿನಲ್ಲಿ ಮುಳುಗಡೆಯಾಗಿತ್ತು. ಈ ಬಾರಿಯೂ ಜಲಾಶಯ ಭರ್ತಿಯಾಗಿದ್ದು, ಜಲಾಶಯ ಸಂಪೂರ್ಣ ಭರ್ತಿಯಾದ ಸಂದರ್ಭದಲ್ಲಿ ಹಿನ್ನೀರಿನಿಂದ ಜಮೀನು ಮುಳುಗಡೆಯಾಗುವುದನ್ನು ತಡೆಯುವ ಸಲುವಾಗಿ ರೂ.120 ಕೋಟಿ ಯೋಜನೆ ತಯಾರು ಮಾಡಲಾಗಿದ್ದು. ಮುಳುಗಡೆ ತಪ್ಪಿಸಲು ಸ್ಟಾಪ್ ಗೇಟ್ ಅಳವಡಿಸಲು ಯೋಜನೆ ರೂಪಿಸಲಾಗಿದೆ ಎಂದರು.

155 ವರ್ಷಗಳ ಇತಿಹಾಸದಲ್ಲಿ ಮೂರನೇ ಬಾರಿ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿದೆ. ವಾಣಿ ವಿಲಾಸಗರ ರಾಜ್ಯದ ಮೊದಲ ಜಲಾಶಯ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಕೆ.ಆರ್.ಎಸ್ ಅಣೆಕಟ್ಟು ನಿರ್ಮಾಣಕ್ಕೆ ವಾಣಿ ವಿಲಾಸ ಸಾಗರ ಜಲಾಶಯವೇ ಪ್ರೇರಣೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾಯಿ ಮಹಾರಾಣಿ ಕೆಂಪನಂಜಮ್ಮಣ್ಣಿ ವಾಣಿ ವಿಲಾಸ ಸನ್ನಿದಾನ ಅವರು, ತಮ್ಮ ಒಡವೆಗಳನ್ನು ಅಡವಿಟ್ಟು, ಈ ಭಾಗದ ಜನರ ಅಭ್ಯುದಯಕ್ಕಾಗಿ ಜಲಾಶಯ ನಿರ್ಮಿಸಿದರು. 1898 ರಿಂದ ಪ್ರಾರಂಭ ಕಾಮಗಾರಿ 1907 ಪೂರ್ಣಗೊಂಡಿತು. ಅಂದಿನ ಕಾಲಕ್ಕೆ ಜಲಾಶಯ ನಿರ್ಮಾಣಕ್ಕೆ ರೂ.45 ಲಕ್ಷ ವೆಚ್ವವಾಗಿದೆ. ಇವತ್ತಿನ ಲೆಕ್ಕದಲ್ಲಿ ಈ ಮೊತ್ತ ಸಾವಿರಾರು ಕೋಟಿಯಾಗುತ್ತಿದೆ. ಇದರಲ್ಲಿ ಜಲಾಶಯ ತಡೆಗೋಡೆಯೊಂದಿಗೆ 129 ಕಿ.ಮೀ. ನಾಲಾ ನಿರ್ಮಾಣ ಮಾಡಲಾಗಿದೆ. ಇಂದು ಜಲಾಶಯ 30 ಸಾವಿರ ಎಕರೆ ಪ್ರದೇಶಕ್ಕೆ ನೀರು ಲಭಿಸುತ್ತಿದೆ ಎಂದರು.

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಯೋಜನೆಗೆ ರೂ.5300 ಕೋಟಿ ರೂಪಾಯಿ ಕೊಡುವುದಾಗಿ ಕೇಂದ್ರ ಬಜೆಟ್‍ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ್ದರು. ಆದರೆ ನಯಾಪೈಸೆ ಬಿಡುಗಡೆ ಮಾಡಿಲ್ಲ. ನಾನು ಹಾಗೂ ಉಪಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಸಚಿವರನ್ನು ಹಲವು ಬಾರಿ ಭೇಟಿ ಮಾಡಿ, ಹಣ ಬಿಡುಗಡೆ ಮಾಡುವಂತೆ ಕೋರಿದರೂ, ಕೊಟ್ಟ ಮಾತಿನಂತೆ ಕೇಂದ್ರ ಸರ್ಕಾರ ರೂ.5300 ಕೋಟಿ ಬಿಡುಗಡೆ ಮಾಡಲಿ. ನಮ್ಮ ಸರ್ಕಾರ ಚುನಾವಣೆ ವೇಳೆ ಕೊಟ್ಟ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿ ಮಾಡಿ, 56 ಸಾವಿರ ಕೋಟಿ ರೂ. ಗಳನ್ನು ಮಧ್ಯವರ್ತಿಗಳಿಲ್ಲದಂತೆ ಎಲ್ಲ ಜಾತಿ, ಧರ್ಮದ ಬಡವರಿಗೆ, ಅರ್ಹ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸುತ್ತಿದ್ದೇವೆ. ರಾಜ್ಯದ ಬಡವರು, ಮಧ್ಯಮ ವರ್ಗದವರು ಸೇರಿ ಎಲ್ಲಾ ಜನ ಸಮುದಾಯಗಳ ನಂಬಿಕೆ ಉಳಿಸಿಕೊಂಡಿದ್ದೇವೆ. ಎಲ್ಲ ಬಡವರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಕಾರ್ಯ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಜಲಸಂಪನ್ಮೂಲ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಚಿತ್ರದುರ್ಗ ಜಿಲ್ಲೆಯ ಆರು ವಿಧಾನ ಸಭಾಕ್ಷೇತ್ರಗಳ ಅಭಿವೃದ್ಧಿಗೆ ಮುಂದಿನ ಬಜೆಟ್‍ನಲ್ಲಿ ವಿಶೇಷ ಯೋಜನೆ ರೂಪಿಸಲಾಗಿದೆ. ನೀರಾವರಿ ಇಲಾಖೆಯಿಂದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 8 ಕೆರೆ ಭರ್ತಿ ಮಾಡಲಾಗುವುದು. ರೂ.25,000 ಕೋಟಿ ವೆಚ್ಚದಲ್ಲಿ ಎತ್ತಿನ ಹೊಳೆ ಜಾರಿ ಮಾಡಿ ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದಾಗಿ ಹೇಳಿದರು.

ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ದಿನ ನನ್ನ ಜೀವನದ ಅವಿಸ್ಮರಣೀಯ ದಿನವಾಗಿದೆ. ಜಿಲ್ಲೆಯ ಜೀವ ನಾಡಿಯಾದ ವಿವಿ ಸಾಗರ ಜಲಾಶಯ ಮಾರಿಕಾಂಬೆಯ ಆಶೀರ್ವಾದಿಂದ ಭರ್ತಿಯಾಗಿದೆ. ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ವೇಗ ನೀಡಿದೆ. 2025ರ ಒಳಗೆ ಜಿಲ್ಲೆಯ 360 ಕೆರೆಗಳ ನೀರು ತುಂಬಿಸಲಾಗುವುದು. ರೂ.2,000 ಕೋಟಿ ವೆಚ್ಚದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೆ.ಆರ್.ಎಸ್ ಉದ್ಯಾನವ ನವೀಕರಣಕ್ಕೆ ಚಿಂತನೆ ನಡೆಸಿದ್ದಾರೆ. ಇದೇ ಮಾದರಿಯಲ್ಲಿ ಪಿಪಿಪಿ ಮಾದರಿಯಲ್ಲಿ ವಾಣಿ ವಿಲಾಸ ಜಲಾಶಯದ ಸೌಂದರ್ಯೀಕರಣಕ್ಕಾಗಿ ಯೋಜನೆ ರೂಪಿಸಬೇಕು. ಜವನಗೊಂಡನಹಳ್ಳಿ ಹಾಗೂ ಧರ್ಮಪುರ ಹೋಬಳಿಯ ತಲಾ 15 ಕೆರೆಗಳನ್ನು ತುಂಬಿಸಲಾಗುವುದು ಎಂದರು.

ಇದಕ್ಕೂ ಪೂರ್ವದಲ್ಲಿ ಸಂಪೂರ್ಣ ಭರ್ತಿಯಾಗಿರುವ ವಿವಿ ಸಾಗರ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್, ಶಾಸಕರುಗಳಾದ ವೀರೇಂದ್ರ ಪಪ್ಪಿ, ಟಿ. ರಘುಮೂರ್ತಿ, ಎನ್.ವೈ. ಗೋಪಾಲಕೃಷ್ಣ ಸೇರಿದಂತೆ ಗಣ್ಯಾತಿಗಣ್ಯರಿಂದ ಜಲಾಶಯದ ಮೇಲ್ಭಾಗದಲ್ಲಿ ಮಂಗಳವಾದ್ಯ ಹಾಗೂ ಕಹಳೆ ವಾದನಗಳ ನಡುವೆ ಬಾಗಿನ ಅರ್ಪಿಸಿ ಭಕ್ತಿ ಸಮರ್ಪಿಸಲಾಯಿತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಪ್ರತಿ ಬಾರಿಯೂ ಉತ್ತಮ ಮಳೆಯಾಗಿ, ಜಲಾಶಯ ಸಂಪೂರ್ಣ ಭರ್ತಿಯಾಗಬೇಕು, ಈ ಭಾಗದ ರೈತರ ಬದುಕು ಹಸನಾಗಬೇಕು ಎಂದು ಪ್ರಾರ್ಥಿಸಿ, ಗಂಗಾಪೂಜೆಯನ್ನು ನೆರವೇರಿಸಿ ಬಾಗಿನ ಸಮರ್ಪಿಸಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಶಾಸಕರಾದ ಎನ್.ವೈ.ಗೋಪಾಲಕೃಷ್ಣ, ಕೆ.ಸಿ.ವೀರೇಂದ್ರ ಪಪ್ಪಿ, ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ, ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಡಾ.ಬಿ.ಯೋಗೇಶ್ ಬಾಬು, ವಿ.ವಿ.ಪುರ ಗ್ರಾಮ ಪಂಚಾಯತಿ ಅಧ್ಯಕ್ಷೆ ಟಿ.ಗಂಗಮ್ಮ ಉಮೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಣ್ಣ, ಲಕ್ಕಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀದೇವಿ ಮದ್ದಣ್ಣ.ಆರ್, ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಯ್ಯ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್, ಭದ್ರಾ ಮೇಲ್ದಂಡೆ ಚಿತ್ರದುರ್ಗ ಯೋಜನಾ ವಲಯದ ಮುಖ್ಯ ಇಂಜಿನಿಯರ್ ಎಫ್.ಹೆಚ್.ಲಮಾಣಿ ಸೇರಿದಂತೆ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು ಇದ್ದರು.

Ads in Post

Author:

...
Nanje Gowda SS

Administrator

I'm a dedicated news author with a passion for storytelling and a commitment to uncovering the truth. With more than 5 years of experience in journalism, I’ve covered a wide range of topics, from local stories that shape our communities to global events that impact the world at large.

No Reviews