ಕೇವಲ ಎಂಟು ವರ್ಷದ ಬಾಲಕಿ ಹೃದಯಾಘಾತಕ್ಕೆ ಬಲಿಯಾಗಿರುವ ದಾರುಣ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಮೂರನೇ ತರಗತಿಯಲ್ಲಿ ಓದುತ್ತಿದ್ದ ತೇಜಸ್ವಿನಿ ಅನ್ನುವ ಬಾಲಕಿ ಟೀಚರ್ ಎದುರೇ ಕುಸಿದು ಬಿದ್ದಿದ್ದಾಳೆ. ಯಾರೂ ಊಹಿಸದ ರೀತಿಯಲ್ಲಿ ಪುಟ್ಟ ಬಾಲಕಿ ಹಾರ್ಟ್ ಅಟ್ಯಾಕ್‌ಗೆ ಬಲಿಯಾಗಿದ್ದಾಳೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮೊದಲೇ ತೇಜಸ್ವಿನಿ ಪ್ರಾಣ ಬಿಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದು ಹೋಗಿದೆ.
ಚಾಮರಾಜನಗರದ ಸೈಂಟ್ ಫ್ರಾನ್ಸಿಸ್ ಶಾಲೆಯಲ್ಲಿ ಓದುತ್ತಿದ್ದ ಶಾಲೆಗೆ ಬಿಇಒ ಹನುಮಶೆಟ್ಟಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಚಾಮರಾಜನಗರದ ಬದನಗುಪ್ಪೆ ಗ್ರಾಮದ ನಿವಾಸಿ ಲಿಂಗರಾಜು ಹಾಗೂ ಶೃತಿ ದಂಪತಿಯ ಏಕೈಕ ಪುತ್ರಿ ತೇಜಸ್ವಿನಿ ಪ್ರತಿನಿತ್ಯದಂತೆ ಶಾಲೆಗೆ ಹೋಗಿದ್ದಾಗ ತರಗತಿಯಲ್ಲಿ ಟೀಚರ್‌ಗೆ ನೋಟ್ಸ್ ತೋರಿಸುವುದಕ್ಕೆ ಎದ್ದು ನಿಂತಿದ್ದಾಗ ಹಠಾತ್ತಾಗಿ ಕುಸಿದು ಬಿದ್ದಿದ್ದಾಳೆ. ಶಾಲಾ ಸಿಬ್ಬಂದಿ ತಕ್ಷಣ ಜೆಎಎಸ್‌ಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ, ಆದರೆ ಆಸ್ಪತ್ರೆಗೆ ಹೋಗುವ ಮೊದಲೇ ಮಗುವಿನ ಪ್ರಾಣಪಕ್ಷಿ ಹಾರಿಹೋಗಿತ್ತು.