ಬೆಂಗಳೂರು: "ಯಾವುದೇ ಕ್ಷಣದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಬಹುದು. ಹೀಗಾಗಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಸಜ್ಜಾಗಬೇಕು" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕರೆ ನೀಡಿದರು.
ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಶಿವಕುಮಾರ್ ಅವರು ಭಾನುವಾರ ಮಾತನಾಡಿದರು. "ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ವಿಚಾರವಾಗಿ ನ್ಯಾಯಾಲಯದಿಂದ ಸಧ್ಯದಲ್ಲೇ ಸೂಚನೆ ಬರುವ ಸಾಧ್ಯತೆ ಇದೆ. ಇನ್ನು ಬೆಂಗಳೂರು ನಗರ ಪಾಲಿಕೆ ಚುನಾವಣೆಯನ್ನು ನಡೆಸಬೇಕಾಗಿದ್ದು ಗ್ರೇಟರ್ ಬೆಂಗಳೂರು ವಿಚಾರವಾಗಿ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದೇವೆ. ಯಾವುದೇ ಕ್ಷಣದಲ್ಲಿ ಈ ಚುನಾವಣೆಗಳು ಘೋಷಣೆಯಾಗಬಹುದು. ಇದಕ್ಕೆ ನಾವೆಲ್ಲರೂ ಸಿದ್ಧತೆ ಮಾಡಿಕೊಳ್ಳಬೇಕು" ಎಂದರು. "ಈ ಚುನಾವಣೆಗಳ ಸಿದ್ಧತೆಗಾಗಿ ಕಾರ್ಯಾಧ್ಯಕ್ಷರ ನೇತೃತ್ವದಲ್ಲಿ ಉಪಾಧ್ಯಕ್ಷರುಗಳನ್ನು ಸೇರಿಸಿಕೊಂಡು ವಿಭಾಗವಾರು ಸಮಿತಿ ರಚಿಸಲಿದ್ದೇವೆ. ಈ ಸಮಿತಿ ಮಾರ್ಚ್ ಒಳಗಾಗಿ ರಾಜ್ಯ ಪ್ರವಾಸ ಮಾಡಿ ಎಲ್ಲಾ ಕಡೆ ಸಮನ್ವಯತೆ ಸಾಧಿಸಿ ತಯಾರಿ ಮಾಡಿಕೊಳ್ಳಬೇಕು. ಎಲ್ಲೆಲ್ಲಿ ನಾಯಕರ ಮಧ್ಯೆ ಹೊಂದಾಣಿಕೆ ಸಾಧಿಸಿ, 50% ಮಹಿಳಾ ಅಭ್ಯರ್ಥಿಗಳನ್ನು ತಯಾರು ಮಾಡುವ ಬಗ್ಗೆ ವರದಿ ಸಲ್ಲಿಸಬೇಕು" ಎಂದು ತಿಳಿಸಿದರು.
"ಇನ್ನು 100 ಕಾಂಗ್ರೆಸ್ ಕಚೇರಿ ನಿರ್ಮಿಸುವ ಹಿನ್ನೆಲೆಯಲ್ಲಿ ಇವುಗಳ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿಸಲು ದಿನಾಂಕ ನಿಗದಿ ಮಾಡುವಂತೆ ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಿದ್ದೇನೆ. ಈ ಕಾರ್ಯಕ್ಕೆ ನಾಲ್ಕು ವಿಭಾಗಗಳಲ್ಲಿ ಸಮಿತಿ ರಚಿಸಲಾಗಿದೆ" ಎಂದು ತಿಳಿಸಿದರು. "ಕಚೇರಿ ಕಟ್ಟಡ ನಿರ್ಮಾಣ ಮಾಡುವ ಜಾಗ ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿ ನೋಂದಣಿ ಆಗದಿದ್ದರೆ ಅಲ್ಲಿ ನಮ್ಮ ನಾಯಕರಿಂದ ಶಂಕುಸ್ಥಾಪನೆ ಮಾಡಿಸುವುದಿಲ್ಲ. ಈ ಕಟ್ಟಡ ನಿರ್ಮಾಣದ ಜಾಗ ವೈಯಕ್ತಿಕ ಹೆಸರು, ಬೇರೆ ಟ್ರಸ್ಟ್ ಹೆಸರಿನಲ್ಲಿ ಇರುವಂತಿಲ್ಲ" ಎಂದರು. "ಇನ್ನು ಆನಂದರಾವ್ ವೃತ್ತದ ಬಳಿ ಇರುವ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಸಿದ್ಧಪಡಿಸಲಾಗಿದೆ. ಈ ಕಟ್ಟಡದ ಶಂಕುಸ್ಥಾಪನೆಯನ್ನು ಅದೇ ದಿನ ನೆರವೇರಿಸಲಾಗುವುದು" ಎಂದು ತಿಳಿಸಿದರು.
ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ವಿವಿಧ ನಾಯಕರು ಹಂತ ಹಂತವಾಗಿ ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಇಂದು ಎಲ್.ಆರ್ ಶಿವರಾಮೇಗೌಡ ಅವರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಜೆಡಿಎಸ್ ಪಕ್ಷದಿಂದ ಸಂಸತ್ ಸದಸ್ಯರಾಗಿದ್ದರು. ಇನ್ನು ನಮ್ಮ ಪಕ್ಷದ ರಾಷ್ಟ್ರೀಯ ವಕ್ತಾರರಾಗಿದ್ದ ಬ್ರಿಜೇಶ್ ಕಾಳಪ್ಪ ಅವರು ಕೂಡ ಆಪ್ ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ತಾವುಗಳು ಮತ್ತೇ ಕಾಂಗ್ರೆಸಿಗರಾಗಿ ಗುರುತಿಸಿಕೊಳ್ಳಬೇಕು, ಕಾಂಗ್ರೆಸ್ ಪಕ್ಷದಲ್ಲೇ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ನಿರ್ಧರಿಸಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಭವಿಷ್ಯವಿದೆ ಎಂದು ಮನದಟ್ಟು ಮಾಡಿಕೊಂಡು ಇಂದು ನಮ್ಮ ಪಕ್ಷ ಸೇರುತ್ತಿದ್ದಾರೆ. ಈ ಇಬ್ಬರು ನಾಯಕರು ಹಾಗೂ ಅವರ ಕಾರ್ಯಕರ್ತರಿಗೆ ಪಕ್ಷದ ಪರವಾಗಿ ಆತ್ಮೀಯವಾಗಿ ಸ್ವಾಗತಿಸುತ್ತೇನೆ. ಕಾಂಗ್ರೆಸ್ ಪಕ್ಷ ಸಮುದ್ರ ಇದ್ದಂತೆ. ಎಲ್ಲಾ ನದಿಗಳು ಸಮುದ್ರ ಸೇರುವಂತೆ ಎಲ್ಲಾ ಪಕ್ಷಗಳ ನಾಯಕರು ನಮ್ಮ ಸಿದ್ಧಾಂತ, ನಾಯಕತ್ವ ಒಪ್ಪಿ ಪಕ್ಷ ಸೇರುತ್ತಿದ್ದಾರೆ.
ಪಕ್ಷಕ್ಕೆ ಸೇರುವವರ ಪಟ್ಟಿಯಲ್ಲಿ ಇನ್ನು ಬೇರೆ ನಾಯಕರು ಇದ್ದಾರಾ, ಶಾಸಕರು ಇದ್ದಾರಾ ಎಂದು ಕೇಳಿದಾಗ, "ದೊಡ್ಡ ಪಟ್ಟಿ ಇದೆ. ಕೆಲವು ನಾಯಕರ ಬಗ್ಗೆ ಸ್ಥಳೀಯವಾಗಿ ಚರ್ಚೆ ಮಾಡಿ ತೀರ್ಮಾನ ಮಾಡಬೇಕಿದೆ. ಚರ್ಚೆ ಮಾಡಿ ಹಂತ ಹಂತವಾಗಿ ಪಕ್ಷ ಸೇರ್ಪಡೆ ಮಾಡಿಕೊಳ್ಳುತ್ತೇವೆ. ಪಕ್ಷಕ್ಕೆ ಸೇರಿಸಿಕೊಳ್ಳುವಾಗ ಮಾಧ್ಯಮಗಳಿಗೆ ಮಾಹಿತಿ ನೀಡುತ್ತೇವೆ" ಎಂದರು. ಶಾಸಕರು ಸಂಪರ್ಕದಲ್ಲಿ ಇದ್ದಾರಾ ಎಂದು ಕೇಳಿದಾಗ, "ಇದು ಗೌಪ್ಯವಾದ ವಿಚಾರ. ಇದನ್ನು ಬಹಿರಂಗಪಡಿಸುವುದಿಲ್ಲ ಸಿದ್ದರಾಮಯ್ಯ ನಮ್ಮ ನಾಯಕರು, ಅವರ ಹೆಸರು ದುರ್ಬಳಕೆ ಬೇಡ: ಡಿಸಿಎಂ ಡಿ.ಕೆ. ಶಿವಕುಮಾರ್ "ಸಿದ್ದರಾಮಯ್ಯ ನಮ್ಮ ಪಕ್ಷದ ನಾಯಕರು. ಅದರಲ್ಲಿ ಯಾವುದೇ ಪ್ರಶ್ನೆ ಇಲ್ಲ. ದಿನಬೆಳಗಾದರೆ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದು ಬೇಡ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಸಿದ್ದರಾಮಯ್ಯ ಅವರು ಪಕ್ಷಕ್ಕೆ ಅನಿವಾರ್ಯ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, "ಸಿದ್ದರಾಮಯ್ಯ ಅವರು ನಮ್ಮ ನಾಯಕರು. ಅವರು ಎಲ್ಲಾ ಚುನಾವಣೆಗೂ ಬೇಕು. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯ್ತಿ, ವಿಧಾನ ಸಭೆ, ಸಂಸತ್ ಚುನಾವಣೆ ಎಲ್ಲದಕ್ಕೂ ಬೇಕು. ಅವರನ್ನು ಪಕ್ಷ ಎರಡು ಬಾರಿ ಸಿಎಂ ಮಾಡಿದೆ. ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಸಿಎಂ ಆಗಿ ಉತ್ತಮ ಕೆಲಸ ಮಾಡುತ್ತಿದ್ದು, ಅವರ ಹೆಸರು ಮಾಧ್ಯಮಗಳಿಗೆ ಆಹಾರವಾಗುವಂತೆ ಗೊಂದಲದ ಹೇಳಿಕೆ ಬೇಡ" ಎಂದು ತಿಳಿಸಿದರು. ಪಕ್ಷದಲ್ಲಿ ಗೊಂದಲದ ಹೇಳಿಕೆ ಯಾಕೆ ಎಂದು ಕೇಳಿದಾಗ, "ಯಾವುದೇ ಗೊಂದಲ ಇಲ್ಲ. ಕಾಂಗ್ರೆಸ್ ಪಕ್ಷ ದಿನ ನಿತ್ಯ ಎಲ್ಲವನ್ನು ಗಮನಿಸುತ್ತಿದೆ" ಎಂದು ತಿಳಿಸಿದರು.
ನೀರಾವರಿ ವಿಚಾರವಾಗಿ ಪಕ್ಷಾತೀತ ಹೋರಾಟ ಮಾಡಬೇಕು ಎಂಬ ದೇವೇಗೌಡರ ಹೇಳಿಕೆ ಬಗ್ಗೆ ಕೇಳಿದಾಗ, "ರಾಜ್ಯದ ನೆಲ, ಜಲ ಹಿತಕ್ಕಾಗಿ ನಾವು ಬದ್ಧವಾಗಿದ್ದೇವೆ. ಅವರು ಮೇಕೆದಾಟಿಗೆ ಒಂದೇ ದಿನದಲ್ಲಿ ಸಹಿ ಹಾಕಿಸುವುದಾಗಿ ಹೇಳಿದ್ದರು. ಮಹದಾಯಿ ವಿಚಾರವಾಗಿ ನಾನೇ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದೆವು. ಇದು ಅವರ ಹೋರಾಟವಲ್ಲ. ರಾಜ್ಯದ ಹೋರಾಟ. ಅವರು ಅಧಿಕಾರದಲ್ಲಿ ಇರುವಾಗ ಹೋರಾಟ ಯಾಕೆ ಮಾಡಬೇಕು? ನಾವು ಈ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ, ನಮಗೆ ಅದರ ಅಗತ್ಯವಿಲ್ಲ. ಅವರಿಗೆ ರಾಜಕಾರಣ ಮಾಡಿ ರೂಢಿ ಇರಬಹುದು. ನಾವು ಹೋರಾಟ ಮಾಡಿದಾಗ ಅವರು ಯಾವ ರೀತಿ ಟೀಕೆ ಮಾಡಿದ್ದಾರೆ ಎಂದು ನೋಡಿದ್ದೇವೆ. ನಾವು ಅದನ್ನು ಮರೆತು ರಾಜ್ಯದ ಹಿತಕ್ಕಾಗಿ ನೀರಾವರಿ ಯೋಜನೆಗೆ ಪ್ರಯತ್ನಿಸುತ್ತೇವೆ. ಭದ್ರಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ಘೋಷಣೆ ಮಾಡಿದ್ದೀರಿ, ಅದನ್ನು ಕೊಟ್ಟಿಲ್ಲ ಎಂದು ಅವರು ಸಂಸತ್ತಿನಲ್ಲಿ ಎಂದಾದರೂ ಪ್ರಶ್ನೆ ಮಾಡಿದ್ದಾರಾ? ದೇವೇಗೌಡರು, ಕುಮಾರಸ್ವಾಮಿ, ಕೇಂದ್ರ ಸಚಿವರು, ಸಂಸದರು ಈ ಬಗ್ಗೆ ಧ್ವನಿ ಎತ್ತುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೆ. ಆ ಕೆಲಸದಲ್ಲೂ ವಿಫಲರಾಗಿದ್ದಾರೆ. ಮೊದಲು ಈ ಕೆಲಸ ಮಾಡಲಿ. ಕಾವೇರಿ ಗೋದಾವರಿ ಜೋಡಣೆ ಮಾಡಿದರೆ ಸಂತೋಷ. ಅವರು ಯೋಜನೆ ತರಲಿ. ನಮ್ಮಿಂದ ಯಾವ ಸಹಕಾರ ಬೇಕು ಹೇಳಲಿ, ನಾವು ನೀಡುತ್ತೇವೆ. ಇಲ್ಲಿಂದಲೇ ಅವರಿಗೆ ಸಾಷ್ಟಾಂಗ ನಮಸ್ಕಾರ ಹಾಕುತ್ತೇವೆ" ಎಂದರು.