ಮಾಜಿ ಪ್ರಧಾನಿ ದೇವೇಗೌಡರು, ಹಾಸನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇಂಥ ಹತ್ತು ಸಮಾವೇಶಗಳು ನಡೆದರೂ ಜೆಡಿಎಸ್ ಪಕ್ಷ ಕಂಗೆಡುವುದಿಲ್ಲ, ಇದನ್ನೆಲ್ಲ ಎದುರಿಸುವುದಕ್ಕೆ ನಾವು ಸದಾ ತಯಾರಾಗಿದ್ದೇವೆ ಎಂದು ದೇವೇಗೌಡರು ಕಾಂಗ್ರೆಸ್ ನಾಯಕರಿಗೆ ಕೌಂಟರ್ ಕೊಟ್ಟಿದ್ದಾರೆ. ಡಿಸೆಂಬರ್ ಐದನೇ ತಾರೀಕು ಹಾಸನದಲ್ಲಿ ಸಮಾವೇಶ ಮಾಡಿ ಜೆಡಿಎಸ್ ಹಾಗೂ ಬಿಜೆಪಿ ವಿರುದ್ಧ ಕಾಂಗ್ರೆಸ್ ರಣಕಹಳೆ ಮೊಳಗಿಸಿತ್ತು. ಬಹುತೇಕ ಕಾಂಗ್ರೆಸ್ ನಾಯಕರು ದೇವೇಗೌಡರನ್ನು ಟಾರ್ಗೆಟ್ ಮಾಡಿ ವೀರಾವೇಶದಿಂದ ಮಾತಾಡಿದ್ದರು. ದೇವೇಗೌಡರು ಈ ವಯಸ್ಸಿನಲ್ಲಿ ಕೋಮುವಾದಿ ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದನ್ನು ವಿರೋಧ ಮಾಡಿದ್ದರು. ಆದರೆ ಇದೀಗ ದೇವೇಗೌಡರು, ಕಾಂಗ್ರೆಸ್ ನಾಯಕರಿಗೆ ಮಾತಿನ ತಿರುಗೇಟು ನೀಡಿದ್ದಾರೆ. ಹಾಸನದ ಸಮಾವೇಶಕ್ಕೆ ಉತ್ತರವಾಗಿ ಜೆಡಿಎಸ್ ಮಂಡ್ಯದಲ್ಲಿ ಬೃಹತ್ ಸಮಾವೇಶ ಕೈಗೊಂಡಿರುವ ಬಗ್ಗೆ ಗೌಡರು ಮಾಹಿತಿ ನೀಡಿದರು. ರಾಜಕೀಯದಲ್ಲಿ ಸೋಲು ಹಾಗೂ ಗೆಲುವನ್ನು ಸಮಾನವಾಗಿ ಸ್ವೀಕಾರ ಮಾಡಬೇಕು. ಇವತ್ತು ನಮ್ಮನ್ನು ಸೋಲಿಸಿದವರೇ ನಾಳೆ ನಮ್ಮನ್ನು ಗೆಲ್ಲಿಸುತ್ತಾರೆ ಎಂದು ದೇವೇಗೌಡರು ಮತದಾರರ ಮನಸ್ಥಿತಿಯ ಬಗ್ಗೆ ಮಾತಾಡಿದರು. ಮೊದಲಿನಿಂದಲೂ ಸಾಕಷ್ಟು ಜನ ಜೆಡಿಎಸ್ ಪಕ್ಷವನ್ನು ಮುಗಿಸುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಆದರೆ ಯಾರಿಗಾದರೂ ಸಾಧ್ಯವಾಯಿತಾ? ಎಂದು ಗೌಡರು ಈ ಸಂದರ್ಭದಲ್ಲಿ ಪ್ರಶ್ನೆ ಮಾಡಿದರು.