ಪಂಚಮಸಾಲಿ ಸಮುದಾಯಕ್ಕೆ ಹಂಚಿಕೆ ಮಾಡಿದ್ದ ಮೀಸಲಾತಿ ವಾಪಸ್ ಪಡೆಯುವುದಾಗಿ ನಾವು ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿರಲಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಹೇಳಿಕೆ ತಿರುಚುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡುವ ಮೂಲಕ ತಿರುಗೇಟು ನೀಡಿರುವ ಅವರು, ಸಂವಿಧಾನದ ಪ್ರಕಾರ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವಂತಿಲ್ಲ.
ಇದರಂತೆ ನಾವು ರಾಜ್ಯದಲ್ಲಿ ಅಲ್ಪಸಂಖ್ಯಾತರಿಗೆ ಪ್ರವರ್ಗ 2ಬಿ ಯಲ್ಲಿ ನೀಡಿದ್ದ ಶೇ.4ರಷ್ಟು ಮೀಸಲಾತಿಯನ್ನು ಕಾನೂನಾತ್ಮಕವಾಗಿ ಪ್ರವರ್ಗ 3ಸಿ ಮತ್ತು 3ಡಿ ಮಾಡಿ ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ಹಂಚಿಕೆ ಮಾಡಿದ್ದೆವು. ಆದರೆ, ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಬೆಂಬಲಿಗರು ಇದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು ಎಂದು ಆರೋಪಿಸಿದ್ದಾರೆ. ಈ ಅರ್ಜಿ ವಿಚಾರಣೆ ಬಂದಾಗ ವಿಧಾನಸಭಾ ಚುನಾವಣೆ ಘೋಷಣೆಯಾಗಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿತ್ತು. ಅದಕ್ಕಾಗಿ ಮಧ್ಯಂತರ ಆದೇಶ ನೀಡುವುದು ಬೇಡ, ನಾವು ಪೂರ್ಣ ಪ್ರಮಾಣದ ವಾದ ಮಾಡುತ್ತೇವೆ ಎಂದು ನಮ್ಮ ವಕೀಲರು ಹೇಳಿದ್ದರು. ಅದಕ್ಕೆ ಸುಪ್ರೀಂ ಕೋರ್ಟ್ ಮುಂದಿನ ದಿನಾಂಕ ನೀಡುತ್ತೇವೆ. ಅಲ್ಲಿಯವರೆಗೂ ಈ ಆದೇಶ ಜಾರಿ ಮಾಡಬೇಡಿ ಅಂತ ಹೇಳಿದ್ದು, ಇದನ್ನು ಮಾತ್ರ ಒಪ್ಪಿಕೊಂಡಿದ್ದೆವು ಎಂದು ವಿವರಿಸಿದ್ದಾರೆ.