ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಮರುಜೀವ ನೀಡುವವರೆಗೂ ನಾನು ವಿಶ್ರಾಂತಿ ಪಡೆಯುವುದಿಲ್ಲ ಎಂದು ಮಾಜಿ ಪ್ರಧಾನಮಂತ್ರಿ ಮತ್ತು ಜೆಡಿಎಸ್ ಮುಖ್ಯಸ್ಥ ಹೆಚ್ಡಿ ದೇವೇಗೌಡ ಅವರು ಶನಿವಾರ ಹೇಳಿದರು.
ಪಕ್ಷದ ಕಚೇರಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್ನಲ್ಲಿ ಸುಮಾರು 80 ಮಹಿಳೆಯರು ಸ್ಪರ್ಧಿಸಬೇಕೆಂದು ಹಾರೈಸಿದರು.
ಪ್ರಧಾನಿ ಮೋದಿ ಅವರು ಮಹಿಳಾ ಸಬಲೀಕರಣಕ್ಕೆ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ನಾವೂ ಕೂಡ ಅದನ್ನು ಮಾದರಿಯಾಗಿ ತೆಗೆದುಕೊಂಡು ಮಹಿಳೆಯರನ್ನೊಳಗೊಂಡ ಪಕ್ಷ ಕಟ್ಟುವಲ್ಲಿ ಯೋಜನೆಗಳನ್ನು ರೂಪಿಸಬೇಕು. ಪಕ್ಷದಲ್ಲಿ ಮುಂದೆ ಕನಿಷ್ಠ 50 ಮಹಿಳಾ ಸಮಾವೇಶಗಳು ನಡೆಯಬೇಕು. ಭಿಕ್ಷೆ ಬೇಡಿಯಾದರೂ ಹಣ ಕೊಡುತ್ತೇನೆ. ಅದಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರು ಬರುತ್ತಾರೆ, ನಾನು ಬರುತ್ತೇನೆ. ನಿಖಿಲ್ ಅವರು ರಾಜ್ಯದ ಉದ್ದಗಲಕ್ಕೂ ಓಡಾಡಿ ಪಕ್ಷವನ್ನು ಕಟ್ಟಬೇಕು. ಸಮಾವೇಶಗಳನ್ನು ನಡೆಸಬೇಕು ಎಂದು ಸಲಹೆ ನೀಡಿದರು.
ಪಕ್ಷ ಸಂಘಟನೆಗೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ನಾನು ಕೂಡ ಪ್ರತಿ ಜಿಲ್ಲೆಗೂ ಭೇಟಿ ಕೊಡುತ್ತೇನೆ. ನಿಖಿಲ್ ನೇತೃತ್ವದಲ್ಲಿ ಯುವಕರು ಸಂಘಟನೆಯನ್ನು ಕಟ್ಟಬೇಕು. ನಾವು ನಡೆಸುವ ಸಮಾವೇಶಗಳಲ್ಲಿ ನಾವು ಎಷ್ಟು ಕೆಲಸ ಮಾಡಿದ್ದೇವೆ, ಈ ನಾಡಿನ ಜನರಿಗೆ ಏನೆಲ್ಲಾ ಮಾಡಿದ್ದೇವೆ ಎನ್ನುವುದನ್ನು ಹೇಳಬೇಕು. ಏನೂ ಮಾಡದೆಯೇ ಅಧಿಕಾರ ಅನುಭವಿಸುತ್ತಿರುವವರ ಬಗ್ಗೆಯೂ ನಾವು ಜನರಿಗೆ ತಿಳಿ ಹೇಳಬೇಕಿದೆ ಎಂದು ಹೇಳಿದರು.
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾದಂತೆ ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಕನಿಷ್ಠ 80 ಮಹಿಳೆಯರು ವಿಧಾನಸಭೆಗೆ ಸ್ಪರ್ಧಿಸಬೇಕು. ಅದನ್ನುನಾನು ನನ್ನ ಕಣ್ಣಿನಿಂದಲೇ ನೋಡಬೇಕು. ಮಹಿಳಾ ಸಬಲೀಕರಣಕ್ಕಾಗಿ ಮೋದಿಯವರು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ನಾಯಕರು ಬಜೆಟ್ ಮಂಡಿಸಿದ್ದಾರೆ. ಅದರ ಬಗ್ಗೆ ನಾನು ಒಂದು ಶಬ್ದವನ್ನೂ ಮಾತನಾಡುವುದಿಲ್ಲ. ಸಮಯ ಬಂದಾಗ ಮಾತನಾಡುತ್ತೇನೆ. ಆದರೆ ಸಾಮಾಜಿಕ ನ್ಯಾಯ ಎಂದೆಲ್ಲಾ ಮಾತನಾಡುತ್ತಿದ್ದಾರೆ. ಈ ರಾಜ್ಯದಲ್ಲಿ ಸಾಮಾಜಿಕ ನ್ಯಾಯ ಮತ್ತು ದುರ್ಬಲ ಜನರಿಗೆ ಮೀಸಲಾತಿ ಸೌಲಭ್ಯ ಕೊಟ್ಟಿದ್ದೇ ನಾವು. ಆದರೆ, ಅದು ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗಿದೆ ಎಂದರು.
ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಿ, ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ನ್ನು ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಒಂದು ಅಲ್ಪಸಂಖ್ಯಾತ ಸಮುದಾಯಕ್ಕೆ ಬಿರಿಯಾನಿ ನೀಡಿದ್ದಾರೆ. ಉಳಿದ ಅಲ್ಪಸಂಖ್ಯಾತ ಸಮುದಾಯಗಳಿಗೆ ಉಪ್ಪಿನಕಾಯಿ ಕೊಟ್ಟು ಚಪ್ಪರಿಸಿಕೊಳ್ಳಿ ಎಂದು ಹೇಳಿದ್ದಾರೆ. ಇಂತಹ ಬಜೆಟ್ ಕೊಟ್ಟವರಿಗೆ ನಾಚಿಕೆಯಾಗಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಜಕೀಯದಲ್ಲಿ ಅವರ ಬೆಳೆ ಬೇಯಿಸಿಕೊಳ್ಳುವುದಕ್ಕೆ ಏನು ತೀರ್ಮಾನ ಮಾಡಬೇಕೋ ಅದನ್ನು ಮಾಡಿದ್ದಾರೆ. ಇದು ಸರಿಯಲ್ಲ. ಯಾವ ಸಮುದಾಯ ನಿಜವಾಗಿಯೂ ಹಿಂದೆ ಉಳಿದಿದೆ ಅಂತವರಿಗೆ ಸಮಾನವಾಗಿ ನ್ಯಾಯ ಕೊಡಲಿ. ಅದನ್ನು ಬಜೆಟ್ ನಲ್ಲಿ ಮಾಡಿಲ್ಲ ಎಂದು ಕಿಡಿಕಾರಿದರು.
ಉರ್ದು ಶಾಲೆಗಳನ್ನು ಉದ್ಧಾರ ಮಾಡುವುದಕ್ಕೆ ಸರ್ಕಾರದ ಬಳಿ ಹಣ ಇದೆ. ಆದರೆ, ವಿವಿಗಳಿಗೆ ಕೊಡಲು ದುಡ್ಡಿಲ್ಲ. ವಕ್ಫ್ ಕಟ್ಟಡಕ್ಕೆ ಅನುದಾನ ಕೊಟ್ಟಿದ್ದಾರೆ. ಆದರೆ, ಎಲ್ಲಾ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ವಿವಿಗಳಿಗೆ ಕೊಡಲು ಇವರಿಗೆ ಕೈ ಬರಲ್ಲ. ಈ ಬಜೆಟ್ ಬಗ್ಗೆ ಕಾಂಗ್ರೆಸ್ ಸುಳ್ಳು ಹೇಳುತ್ತಿದೆ. ಜನರಿಗೆ ಇನ್ನು ಸ್ವಲ್ಪ ದಿನದಲ್ಲೇ ಸತ್ಯ ಏನೆಂದು ಗೊತ್ತಾಗುತ್ತದೆ. ಬೆಂಗಳೂರು ನಗರದ ಸುರಂಗ ಯೋಜನೆಗೆ ರೂ 40,000 ಕೋಟಿ.ಕೊಡುತ್ತೇವೆ ಎಂದು ಹೇಳಿದ್ದಾರೆ. ಎಲ್ಲಿಂದ ಹಣ ಕೊಡುತ್ತಾರೆ? ಇಷ್ಟು ಹಣವನ್ನು ಎಲ್ಲಿಂದ ತರುತ್ತಾರೆ. ಇದು ನಿಜಕ್ಕೂ ಆಗುತ್ತಾ? ಅಥವಾ ಕನಸಾಗಿಯೇ ಉಳಿಯುತ್ತಾ? ಎಂದು ಅನುಮಾನ ವ್ಯಕ್ತಪಡಿಸಿದರು.