ಬೆಂಗಳೂರು : ಗ್ರೇಟರ್ ಬೆಂಗಳೂರು ಕಾರ್ಯಾಕಾರಿ ಸಮಿತಿಗೆ ಅಧ್ಯಕ್ಷರನ್ನು ನೇಮಿಸುವ ಬಗ್ಗೆ ವಿಧಾನಸಭೆ ಬಿಜೆಪಿ ಶಾಸಕ ಅಶ್ವಥ ನಾರಾಯಣ ಅವರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಉತ್ತರಿಸಿದ್ದಾರೆ. ಬಿಜೆಪಿ ಸಮಯದಲ್ಲಿ ಬೆಂಗಳೂರಿನವರೇ ಮೂರು ನಾಲ್ಕು ಮಂದಿ ಸಚಿವರು ಇದ್ದರು. ಯಾರು ಜವಾಬ್ದಾರಿ ಹೊರುವವರು. ಕಾರ್ಯಕಾರಿ ಸಮಿತಿಯಲ್ಲಿ ಬೆಂಗಳೂರು ಉಸ್ತುವಾರಿ ಸಚಿವರು ಒಬ್ಬರೇ ಇರುವುದಿಲ್ಲ ಎಂದು ಹೇಳಿದ್ದಾರೆ.

ಡಾಕ್ಟರ್ ಅಶ್ವಥನಾರಾಯಣ ಅವರು ಮರೆತು ಹೋಗಿದ್ದಾರೆ. ಬಿಜೆಪಿ ಅವಧಿಯಲ್ಲಿ ಬೆಂಗಳೂರು ದಕ್ಷಿಣ, ಉತ್ತರಕ್ಕೆ ಉಸ್ತುವಾರಿ ಸಚಿವರಿದ್ದರು. ಬೇಕಿದ್ದರೇ ಅಶೋಕ ಅವರನ್ನೇ ಕೇಳಿ ಎಂದು ಕೃಷ್ಣಭೈರೇಗೌಡ ಅವರು ಡಿಸಿಎಂ ಮಾತಿಗೆ ಬೆಂಬಲವಾಗಿ ನಿಂತರು. ಆಗ ಮತ್ತೆ ವಿಧಾನಸಭೆಯಲ್ಲಿ ಮಾತು ಮುಂದುವರೆಸಿದ ಡಿ ಕೆ ಶಿವಕುಮಾರ್ ಅವರು, ಕೆ.ಆರ್.ಪುರ ಹಾಗೂ ಮಿಕ್ಕಿದ್ದು ಬಿಟ್ಟು ಏಳು ಮಂತ್ರಿಗಳಿಗೆ ನಾನೇ ಉಸ್ತುವಾರಿಯಿದ್ದೆ. ಬೆಂಗಳೂರು ನಗರ ಕಾರ್ಪೋರೇಷನ್ ಬೇರೆಯಿತ್ತು. ಬೆಂಗಳೂರಿನಲ್ಲಿ ಐದಾರು ಜನ ಮಂತ್ರಿಗಳಿದ್ದರೇ, ಆಗ ಯಾರಿಗೆ ಜವಾಬ್ದಾರಿ ಕೊಡಬೇಕು? ಈ ಮೊದಲು ಬೆಂಗಳೂರು ಉಸ್ತವಾರಿಯೇ ಇರಲಿಲ್ಲ, ಕೇವಲ ನಗರಾಭಿವೃದ್ದಿ ಸಚಿವರು ಮಾತ್ರ ಇದ್ದರು. ಧರಂ ಸಿಂಗ್ ಹಾಗೂ ಜಾರ್ಜ್ ಅವರು ಕೇವಲ ನಗರಾಭಿವೃದ್ದಿ ಸಚಿವರಾಗಿದ್ದರು. ಪಂಚಾಯಿತಿಗಳಿಗೆ ಬೇರೆ ಸಚಿವರು ಇದ್ದರು ಎಂದರು.

ಕಾರ್ಯಾಕಾರಿ ಸಮಿತಿಯ ಅಧ್ಯಕ್ಷ ಹುದ್ದೆಗೆ ಬೆಂಗಳೂರು ಅಭಿವೃದ್ದಿ ಸಚಿವರು 'ಅಥವಾ' ಇಂತಹವರನ್ನು ನೇಮಕ ಮಾಡಬಹುದು ಎಂದು ಸೇರಿಸಿರುವುದರ ಬಗ್ಗೆ ತಕರಾರು ವ್ಯಕ್ತಪಡಿಸಿದಾಗ, ಮುಂದಕ್ಕೆ ನಿಮ್ಮ ಅಥವಾ ನಮ್ಮ ಸರ್ಕಾರ ಬರುತ್ತದೆ ಎಂದು ತಿಳಿದುಕೊಳ್ಳಿ. ಆಗ ಬೆಂಗಳೂರಿನಲ್ಲಿ ಯಾರೂ ಗೆಲ್ಲುವುದಿಲ್ಲ. ಆಗ ಏನು ಮಾಡುತ್ತೀರಿ?. ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದೆ. ಆದರೆ ಹೈದರಾಬಾದ್ ಸ್ಥಳೀಯ ಸಂಸ್ಥೆಯಲ್ಲಿ ಒಬ್ಬರೂ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಏನು ಮಾಡುವುದು? ಎಂದು ಕೇಳಿದರು. ಇನ್ನು ಮುಖ್ಯಮಂತ್ರಿಗಳಿಗೆ ಸಮಯಾವಕಾಶ ಇರುವುದಿಲ್ಲ ಎಂಬ ವಿಚಾರ ಪ್ರಸ್ತಾಪಿಸಿದ್ದಾರೆ. ನನಗೂ ಗೊತ್ತಿದೆ. ಸುಮಾರು 1.50 ಕೋಟಿ ಜನರು, ಅಂದರೆ ರಾಜ್ಯದ ಜನಸಂಖ್ಯೆಯಲ್ಲಿ ಶೇ. 25 ರಷ್ಟು ಜನಸಂಖ್ಯೆ ಇರುವ ನಗರದ ಬಗ್ಗೆ ಮುಖ್ಯಮಂತ್ರಿಗಳು ಸಭೆ ಮಾಡಲೇಬೇಕು. ಇದು ಅವರ ಕರ್ತವ್ಯ. ಮುಖ್ಯಮಂತ್ರಿಗಳಾದವರು ಕೇವಲ ಸಿಟಿ ರೌಂಡ್ಸ್ ಮಾಡಿದರೆ ಸಾಲುವುದಿಲ್ಲ. ಅವರೂ ಸಭೆ ಮಾಡಬೇಕು. ಹಣಕಾಸು ಹಂಚಿಕೆ ಮಾಡುವವರು ಅವರು. ನಾವು ಇಂದು ಪೆರಿಫೆರಲ್ ರಿಂಗ್ ರಸ್ತೆ, ಟನಲ್ ರಸ್ತೆ ಬಗ್ಗೆ ಮಾತನಾಡುತ್ತೇವೆ. ಅಂದೇ ಪಿಆರ್ ಆರ್ ಯೋಜನೆ ಮಾಡಿದ್ದರೆ 3-4 ಸಾವಿರ ಕೋಟಿಯಲ್ಲಿ ಪೂರ್ಣಗೊಳ್ಳುತ್ತಿತ್ತು. ಇಂದು ಆ ವೆಚ್ಚ 26 ಸಾವಿರ ಕೋಟಿ ರೂ. ಆಗುತ್ತಿದೆ. ಅಂದಿನ ಕಾಲದಲ್ಲಿಯೇ ಮೆಟ್ರೋ ಡಬಲ್ ಡೆಕ್ಕರ್ ಮಾಡಿದ್ದರೆ ಇಂದು ಈ ಪರಿಸ್ಥಿತಿ ಇರುತ್ತಿರಲಿಲ್ಲ. ನೀವು ಬೆಂಗಳೂರಿನ ಯಾವುದೇ ಭಾಗದಲ್ಲಿ ರಸ್ತೆ ಅಗಲೀಕರಣಕ್ಕೆ ಕಟ್ಟಡ ಕೆಡವಬೇಕಾದರೆ ದುಪ್ಪಟ್ಟು ಪರಿಹಾರ ನೀಡಬೇಕು. ಇದೆಲ್ಲವನ್ನು ನೋಡಿಯೇ, ಸಾಲವಾದರೂ ಸರಿ, ಎಲ್ಲ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಹೊರಟಿದ್ದೇವೆ. ನಮ್ಮ ಮನೆಯಲ್ಲಿ ನಮ್ಮ ಮಕ್ಕಳೇ ಸಂಚಾರ ದಟ್ಟಣೆ ವಿಚಾರವಾಗಿ ನನಗೆ ಬಯ್ಯುತ್ತಿರುತ್ತಾರೆ.

ನಾನು ಮುಂಬೈ, ದೆಹಲಿ, ಹೈದರಾಬಾದ್ ಮತ್ತಿತರ ನಗರಗಳಲ್ಲಿ ಸಂಚಾರಿ ದಟ್ಟಣೆ ನೋಡಿದ್ದೇನೆ. ನಮಗಿಂತ ಅಲ್ಲಿ ಹದಗೆಟ್ಟ ಪರಿಸ್ಥಿತಿ ಇದೆ. ಹಾಗೆಂದು ನಮ್ಮ ಜವಾಬ್ದಾರಿ ಮರೆಯುವಂತಿಲ್ಲ. ನಾವು ಸೇನೆಯವರ ಜತೆ ಮಾತನಾಡಿ ಅವರ ಜಾಗವನ್ನು ಪಡೆಯುತ್ತಿದ್ದೇವೆ. ಇದು ಅಷ್ಟು ಸುಲಭವಾದ ಕೆಲಸವಲ್ಲ. ಇದನ್ನು ಒಂದೇ ದಿನದಲ್ಲಿ ಮಾಯಾ ಮಂತ್ರ ಮಾಡಿ ಸರಿಪಡಿಸಲು ಆಗುವುದಿಲ್ಲ ಎಂದೇ ದೇವರ ವಿಚಾರ ಪ್ರಸ್ತಾಪ ಮಾಡಿದ್ದೆ. ಇದಕ್ಕಾಗಿ ಸರಿಯಾದ ಯೋಜನೆ ಮಾಡಿ, ಅದನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವ ಅಗತ್ಯವಿದೆ ಎಂದು ತಿಳಿಸಿದರು. ಬೆಂಗಳೂರಿಗೆ ಹೊಸ ದಿಕ್ಕು ನೀಡಬೇಕು ಎಂದು ನಾವು ಪ್ರಯತ್ನ ಮಾಡುತ್ತಿದ್ದು, ಮುಖ್ಯವಾಗಿ ಇಂಧನ ವಿಚಾರವಾಗಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಅನಿಲ ವಿದ್ಯುತ್ ಉತ್ಪಾದನಾ ಘಟಕ ಮಾಡಿದ್ದು ನಾವು. ಇನ್ನು ನಗರ ಯೋಜನೆ ವಿಚಾರವಾಗಿ ಕೆಲವು ತಿದ್ದುಪಡಿಯನ್ನು ತಂದಿದ್ದೇವೆ. ದೇವರು ವರವನ್ನು ಕೊಡಲ್ಲ, ಶಾಪವನ್ನು ಕೊಡಲ್ಲ, ಕೇವಲ ಅವಕಾಶ ಮಾತ್ರ ನೀಡುತ್ತಾನೆ. ಈ ಅವಕಾಶದಲ್ಲಿ ಬೆಂಗಳೂರನ್ನು ಅಂತರರಾಷ್ಟ್ರೀಯ ನಗರವನ್ನಾಗಿ ಮಾಡಿ ಗಟ್ಟಿಗೊಳಿಸಲು ಈ ಮಸೂದೆ ಜಾರಿಗೆ ತರುತ್ತಿದ್ದೇವೆ ಎಂದು ತಿಳಿಸಿದರು.

ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕದಲ್ಲಿ 74ನೇ ತಿದ್ದುಪಡಿಗೆ ಯಾವುದೇ ಧಕ್ಕೆಯಾಗುವುದಿಲ್ಲ. ಬೆಂಗಳೂರಿನ ಭವಿಷ್ಯದ ಹಿತದೃಷ್ಟಿಯಿಂದ ಈ ವಿಧೇಯಕ ಪವಿತ್ರವಾದದ್ದು. ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ಕಾರಣ ಓರ್ವ ಪಾಲಿಕೆ ಆಯುಕ್ತರು, ಮುಖ್ಯ ಇಂಜಿನಿಯರ್ ಗಳಿಂದ ನಿಭಾಯಿಸಲು ಕಷ್ಟವಾಗುತ್ತಿದೆ. ಹೀಗಾಗಿ ಈ ಮಸೂದೆಯಲ್ಲಿ 7 ಪಾಲಿಕೆ ರಚನೆಗೆ ಮುಂದಾಗಿದ್ದೇವೆ. ಭವಿಷ್ಯದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸ್ಥಳೀಯ ಮಟ್ಟದಲ್ಲಿ ಶಾಸಕರಿಗೆ ನಿಯಂತ್ರಣ ಇರಬೇಕು, ವಾರ್ಡ್ ಸಮಿತಿಗಳಾಗಬೇಕು, ಅಲ್ಲಿ ಜನಪ್ರತಿನಿಧಿಗಳು ಇರಬೇಕು. ಈ ಮಸೂದೆಯಲ್ಲಿ ಎಲ್ಲಾ ಶಾಸಕರು, ಸಂಸದರು ಕೂಡ ಸದಸ್ಯರಾಗಿರುತ್ತಾರೆ. ಮುಖ್ಯಮಂತ್ರಿಗಳು ಇದರ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರು ಇದಕ್ಕೆ ಉಪಾಧ್ಯಕ್ಷರಾಗಿರುತ್ತಾರೆ. ಪಾಲಿಕೆ ರಚನೆಯನ್ನು ನಾವು ಯಾವುದೇ ರೀತಿ ಬದಲವಾವಣೆ ಮಾಡುತ್ತಿಲ್ಲ ಎಂದು ತಿಳಿಸಿದರು.

ತೆರಿಗೆ ವಿಚಾರವಾಗಿ ಈ ಹಿಂದೆ ದೆಹಲಿಯಿಂದ ಕೆಲವು ಸೂಚನೆ ನೀಡಲಾಗಿತ್ತು. ಇಲ್ಲಿನ ತೆರಿಗೆಯನ್ನು ನಾವು ಕೆಲವು ತಿದ್ದುಪಡಿ ಮಾಡಿದ್ದೆವು. ಗ್ರೇಟರ್ ಬೆಂಗಳೂರು ಅಥಾರಿಟಿಯಲ್ಲಿ ನಾವು ಪೊಲೀಸರು, ನೀರು ಸರಬರಾಜು, ಬಿಎಂಟಿಸಿ, ಬಿಎಂಆರ್ ಟಿಸಿ, ವಿಪತ್ತು ನಿರ್ವಹಣೆ, ಅಗ್ನಿಶಾಮಕದಳ, ಸಂಚಾರಿ ಪೊಲೀಸ್, ಕೊಳೆಗೇರಿ ಅಭಿವೃದ್ಧಿ ಮಂಡಳಿ, ಬೆಸ್ಕಾಂ, ಬಿಎಂಎಲ್ ಟಿಎ, ಬಿಡಿಎ ಸೇರಿದಂತೆ ಇತರೆ ವಿಭಾಗಗಳ ಆಯುಕ್ತರು, ಎಂ.ಡಿ ಹಾಗೂ ಸಿಇಓಗಳನ್ನು ಒಳಗೊಂಡಿದ್ದೇವೆ. ಇಲ್ಲಿ ಪ್ರತಿಯೊಬ್ಬರಿಗೂ ಹೊಣೆಗಾರಿಕೆ ಹಾಗೂ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿಸಿದರು

Ads in Post

Author:

...
Nanje Gowda SS

Administrator

I'm a dedicated news author with a passion for storytelling and a commitment to uncovering the truth. With more than 5 years of experience in journalism, I’ve covered a wide range of topics, from local stories that shape our communities to global events that impact the world at large.

No Reviews