ಬೆಂಗಳೂರು : ಆಧುನಿಕ ಕಂಪ್ಯೂಟರ್ ಜಗತ್ತಿನಲ್ಲೂ ಸಹ ಸರ್ವೇ ಕೆಲಸವನ್ನು ತಾಂತ್ರಿಕಗೊಳಿಸದೆ ಜನರ ಮೇಲೆ ಹೊರೆ ಹಾಕುವುದು ಅಮಾನವೀಯ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ನಡವಳಿಕೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಸರ್ವೇ ಆಯುಕ್ತರ ಕಚೇರಿಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ 465 ಜನ ಭೂ ಮಾಪಕರಿಗೆ ಆಧುನಿಕ ತಂತ್ರಜ್ಞಾನ ಆಧಾರಿತ ರೋವರ್ ನೀಡಿ ಮಾತನಾಡಿದರು.

"ಸರ್ವೇ ಕೆಲಸವನ್ನು ಹಿಂದಿನಿಂದಲೂ ಚೈನ್ ಹಿಡಿದೇ ಭೂಮಿಯನ್ನು ಅಳೆಯುವ ಸಂಪ್ರದಾಯ ಚಾಲ್ತಿಯಲ್ಲಿದೆ. ಬಿಸಿಲಿನಲ್ಲಿ ಸರ್ವೇಯರ್ ಜೊತೆಗೆ ಇಬ್ಬರು ಸಹಾಯಕರೂ ಕೆಲಸ ಮಾಡಬೇಕಿತ್ತು. ಸರ್ವೇ ಮಾಡಲು ಕನಿಷ್ಟ 70 ನಿಮಿಷ ಅದನ್ನು ನಕ್ಷೆ ಮಾಡಲು 3 ಗಂಟೆ ಸಮಯ ವ್ಯರ್ಥವಾಗುತ್ತಿತ್ತು. ಆದರೆ, ಆಧುನಿಕ ತಂತ್ರಜ್ಞಾನ ಆಧಾರಿತ ರೋವರ್ ಈ ಕೆಲಸವನ್ನು ಕೇವಲ 10 ನಿಮಿಷಕ್ಕೆ ಮುಗಿಸಲಿದೆ” ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ 1830 ರಿಂದ 1870 ರ ವರೆಗೆ ಮಾತ್ರ ಸರ್ವೇ ಕೆಲಸ ಆಗಿದೆ. 1967 ರಲ್ಲಿ ಅಲ್ಪ ಸಲ್ಪ ರೀರ್ವೇ ಆಗಿದೆ ಎಂಬುದನ್ನು ಬಿಟ್ಟರೆ ಉಳಿದಂತೆ ಸರ್ವೇ ಆಗಿಲ್ಲ. ಆದರೆ, ಪ್ರಸ್ತುತ ರೈತರ ನಾನಾ ಸಮಸ್ಯೆಗಳಿಗೆ ಸರ್ವೇ ಹಾಗೂ ರೀ ಸರ್ವೇ ಕೆಲಸಗಳಿಗೆ ವೇಗ ತುಂಬುವ ಅಗತ್ಯವಿದೆ. ಆದರೆ, ಬಹುಷಾ ಕ್ರಿ.ಶ. 1806 ರಿಂದಲೂ ರಿಂದಲೂ ಸರ್ವೇ ಕೆಲಸಗಳಿಗೆ ಬಳಸಿದ ಚೈನ್ ವ್ಯವಸ್ಥೆ ಈಗಲೂ ಮುಂದುವರೆಯುತ್ತಿರುವುದು ಆಘಾತಕಾರಿ ಎಂದು ಕಳವಳ ವ್ಯಕ್ತಪಡಿಸಿದರು.

ಕಳೆದ 200 ವರ್ಷದಲ್ಲಿ ಪ್ರಪಂಚ ಇಷ್ಟು ಬದಲಾದರೂ ನಮ್ಮ ವಿಧಿ-ವಿಧಾನ ಹಾಗೆ ಇದೆ. ಪ್ರಪಂಚದ ಮುಖ ಅಂತರಾಳ ಬದಲಾದರೂ, ಇಲಾಖೆ ಕೆಲಸ ಮಾಡುವ ರೀತಿ ನೀತಿ ಮಾತ್ರ ಬದಲಾಗಿಲ್ಲ. ಆದರೆ, ಸರ್ವೇ ಕೆಲಸವನ್ನು ತಾಂತ್ರಿಕಗೊಳಿಸದೆ ಕೆಲಸ ಮಾಡೋಕೆ ಜನ ಇದ್ದಾರೆ ಎಂದು ಉಢಾಫೆಯಿಂದ ನೌಕರರ ಮೇಲೆ ಹೊರೆ ಹಾಕುವುದು ಅಮಾನವೀಯ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ನಡವಳಿಕೆ ಎಂದು ಅಭಿಪ್ರಾಯಪಟ್ಟರು.

ಸರ್ವೇ ಇಲಾಖೆಯಲ್ಲಿ ಸಂಪೂರ್ಣ ತಂತ್ರಜ್ಞಾನ ಬಳಕೆ

ರಾಜ್ಯದ ಪ್ರತಿಯೊಬ್ಬ ಭೂ ಮಾಪಕರಿಗೂ ರೋವರ್ ನೀಡುವ ಗುರಿ

 ರೈತರ ಶತಮಾನಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರದ ಭರವಸೆ

“ಚೈನ್ ಸರ್ವೇ ಕೆಲಸದಲ್ಲಿ ಕೆಲವರು ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಸರ್ವೇಯಲ್ಲಿ ಬದಲಾವಣೆ ಮಾಡಬಹುದು. ಇದರಿಂದ ಹಲವರು ಇಂದಿಗೂ ಕೋರ್ಟ್ ಕಚೇರಿಗೆ ಅಲೆಯುವಂತಾಗಿದೆ. ಆದರೆ, ರೋವರ್ ಸರ್ವೇಯಲ್ಲಿ ಇಂತಹ ಅಕ್ರಮಗಳಿಗೆ ಆಸ್ಪದ ಇರುವುದಿಲ್ಲ. ಹೀಗಾಗಿ ಇಲಾಖೆಯಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಜನರಿಗೆ ತ್ವರಿತ ಸರ್ವೇ ಮಾಡಿಕೊಡುವುದು ಹಾಗೂ ಅಧಿಕಾರಿಗಳಿಗೆ ಕೆಲಸದ ಒತ್ತಡ ಕಡಿಮೆ ಮಾಡುವುದು ನಮ್ಮ ಉದ್ದೇಶವಾಗಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಭೂ ಮಾಪಕರಿಗೂ ಒಂದು ರೋವರ್ ನೀಡುವುದು ನಮ್ಮ ಗುರಿ” ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ರಿಜ್ವಾನ್ ಅರ್ಷದ್ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತರಾದ ಸುನೀಲ್ ಕುಮಾರ್ ಹಾಗೂ ಭೂ ಮಾಪನಾ ಇಲಾಖೆ ಆಯುಕ್ತರಾದ ಮಂಜುನಾಥ್ ಅವರು ಉಪಸ್ಥಿತರಿದ್ದರು.

Ads in Post

Author:

...
Nanje Gowda SS

Administrator

I'm a dedicated news author with a passion for storytelling and a commitment to uncovering the truth. With more than 5 years of experience in journalism, I’ve covered a wide range of topics, from local stories that shape our communities to global events that impact the world at large.

No Reviews