ಬಜೆಟ್ನಲ್ಲಿ ವಿಶೇಷ ಅನುದಾನ ಒದಗಿಸಲು ಒತ್ತಾಯಿಸಿ ರಾಜ್ಯ ಮಟ್ಟದ ವಿಧಾನಸೌಧ ಛಲವನ್ನು ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರು ನಗರದ ಫ್ರೀಡಂ ಪಾರ್ಕ್ ನಲ್ಲಿ ನೆರೆದಿದ್ದ ನೂರಾರು ಮಸಣ ಕಾರ್ಮಿಕರು, ದೇವದಾಸಿ ಮಹಿಳೆಯರು ಮತ್ತು ದಲಿತರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ಮಸಣ ಕಾರ್ಮಿಕರು, ದೇವದಾಸಿಯರಿಗೆ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಭೂಮಿ ನೀರು ಮತ್ತು ಉದ್ಯೋಗವನ್ನು ಆದ್ಯತಾವಲಯ ಎಂದು ಗುರುತಿಸಬೇಕು. ಹೆಚ್ಚಿನ ಅನುದಾನ ಒದಗಿಸಬೇಕು. ಇದಕ್ಕಾಗಿ ವಿಧಾನಸಭೆಯ ವಿಶೇಷ ಅಧಿವೇಶ ನ ಕರೆದು ಚರ್ಚಿಸಬೇಕು ಎಂದು ಕರ್ನಾಟಕದ ದಲಿತ ಹಕ್ಕುಗಳ ಸಮಿತಿಯ ರಾಜ್ಯಾಧ್ಯಕ್ಷರಾದ ಗೋಪಾಲಕೃಷ್ಣ ಹರಳಹಳ್ಳಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
SCSP/TSP ಯೋಜನೆಯ ಹಣ ದುರ್ಬಳಕೆ ಬೇಡ. ದಲಿತ ಕುಟುಂಬಕ್ಕೆ ನೇರವಾಗಿ ತಲುಪಿಸಿ.ಸೂರಿಲ್ಲದ ದಲಿತರಿಗೆ ನಿವೇಶನ ಭೂಮಿ ಕೊಳವೆ ಬಾವಿ ಮಂಜೂರು ಮಾಡಿ. ಮಸಣ ಕಾರ್ಮಿಕರು ದೇವದಾಸಿ ಮಹಿಳೆಯರ ಗಣತಿ ಮಾಡಿ ಪಿಂಚಣಿ ಸೇವಾ ಸೌಲಭ್ಯ ನೀಡಿ ಎಂದಿದ್ದಾರೆ.
ದಲಿತರ 10 ವರ್ಷ ಖರ್ಚು ಮಾಡಿದ 2,75,000 ಕೋಟಿ ಬಗ್ಗೆ ಚರ್ಚಿಸಲು ವಿಧಾನಸಭೆ ವಿಶೇಷ ಅಧಿವೇಶನ ನಡೆಸಬೇಕು. ಸಮುದಾಯ ಭವನ, ಸ್ಮಶಾನ ಭೂಮಿ ನೀಡಬೇಕು. ದಲಿತರ ಮೇಲಿನ ದೌರ್ಜನ್ಯ ವಿಚಾರಣೆಗೆ ವಿಶೇಷ ತ್ವರಿತ ನ್ಯಾಯಾಲಯಗಳನ್ನು ತೆರೆಯಿರಿ ಎಂದು ಪ್ರತಿಭಟನಾಕಾರರು ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.