ಸದನದಲ್ಲಿ ಲೋಕಸೇವಾ ಕದನ; ಮರು ಪರೀಕ್ಷೆಗೆ ಬಿಗಿಪಟ್ಟು, ಮುಜುಗರದಿಂದ ಪೇಚಿಗೆ ಸಿಲುಕಿದ ಸರ್ಕಾರ ಲಂಚಾವತಾರ, ಪ್ರಶ್ನೆಪತ್ರಿಕೆ ಎಡವಟ್ಟಿನಿಂದಲೇ ಕುಖ್ಯಾತಿ ಅಂಟಿಸಿಕೊಂಡಿರುವ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಸರಣಿ ಲೋಪಗಳು ಮಂಗಳವಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿ ತೀವ್ರ ಕೋಲಾಹಲಕ್ಕೆ ಕಾರಣವಾಯಿತು.
ಕೆಪಿಎಸ್ಸಿ ವಿವಾದಗಳ ಕುರಿತು ದನಿ ಎತ್ತಿದ ವಿಪಕ್ಷಗಳು ಸರ್ಕಾರದ ಜನ್ಮ ಜಾಲಾಡಿದವು. ಕೆಪಿಎಸ್ಸಿ ಕರ್ಮಕಾಂಡ ಈವರೆಗೆ ಸದನದ ಹೊರಗೆ ಸದ್ದು ಮಾಡುತ್ತಿತ್ತು. ಆದರೆ ಮಂಗಳವಾರ ವಿಧಾನಸಭೆಯಲ್ಲಿ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿತು. ಆಡಳಿತ ಪಕ್ಷದ ಸದಸ್ಯರು ಎಡವಟ್ಟುಗಳು, ವಿವಾದಗಳ ಹೊಣೆಯನ್ನು ಕೆಪಿಎಸ್ಸಿ ತಲೆಗೆ ಕಟ್ಟಲು ಎಷ್ಟೇ ಪ್ರಯತ್ನ ಪಟ್ಟರೂ ಪ್ರಕರಣದ ಗಂಭೀರತೆಯಿಂದ ಪಾರಾಗಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ.
ಪ್ರತಿಪಕ್ಷ ನಾಯಕ ಆರ್. ಅಶೋಕ್ ಬೆಳಗಿನ ಕಲಾಪದಲ್ಲಿ ನಿಳುವಳಿ ಸೂಚನೆ ಮಂಡಿಸಿ ಈ ವಿಷಯದ ಚರ್ಚೆಗೆ ಅವಕಾಶ ಕೋರಿದರು. ಭೋಜನ ವಿರಾಮದ ನಂತರ ಈ ವಿಷಯವನ್ನು ನಿಯಮ 69ಕ್ಕೆ ವರ್ಗಾಯಿಸಿ ಪ್ರಾಥಮಿಕ ಮಂಡನೆಗೆ ಸ್ಪೀಕರ್ ಯು.ಟಿ. ಖಾದರ್ ಅವಕಾಶ ನೀಡಿದರು. ಲೋಕಸೇವಾ ಆಯೋಗದಲ್ಲಿ ಪ್ರತಿ ಹುದ್ದೆಗೂ ರೇಟ್ ಕಾರ್ಡ್ ಫಿಕ್ಸ್ ಮಾಡಲಾಗಿದೆ. ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ, ಮೌಖಿಕ ಸಂದರ್ಶನಕ್ಕೆ ಕ್ರಮವಾಗಿ 60 ಲಕ್ಷ ರೂ., 1 ಕೋಟಿ ರೂ. ಹಾಗೂ ಮೌಖಿಕ ಸಂದರ್ಶನ ಪರೀಕ್ಷೆಗೆ 40 ಲಕ್ಷ ರೂ. ಫಿಕ್ಸ್ ಮಾಡಿದ್ದಾರೆ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ಈ ಆರೋಪಕ್ಕೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳನ್ನು ಉಲ್ಲೇಖಿಸಿ ತರಾಟೆಗೆ ತೆಗೆದುಕೊಂಡರು. ಪರೀಕ್ಷೆಯಲ್ಲಿ ಹೇಗೆ ಅವ್ಯವಹಾರ ಎಸಗಲಾಗುತ್ತದೆ? ಮಧ್ಯವರ್ತಿಗಳ ಮೂಲಕ ಲಂಚ ಹೇಗೆ ಪಡೆಯಲಾಗುತ್ತದೆ? ಒಎಂಆರ್ ಶೀಟ್ ಹೇಗೆ ಸ್ಕಾಯನ್ ಮಾಡಲಾಗುತ್ತದೆ ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಡುವ ಮೂಲಕ ಅಶೋಕ್ ಸದನವನ್ನು ತಬ್ಬಿಬ್ಬುಗೊಳಿಸಿದರು. ಈ ನಡುವೆ ಕಾನೂನು ಸಚಿವ ಎಚ್.ಕೆ. ಪಾಟೀಲ, ಪ್ರಿಯಾಂಕ್ ಖರ್ಗೆ, ಶಿವಲಿಂಗೇಗೌಡ, ಷಡಕ್ಷರಿ ಮತ್ತಿತರರು ಮಧ್ಯ ಪ್ರವೇಶಿಸಿದರು. ಇದು ಕೆಪಿಎಸ್ಸಿ ಕರ್ಮಕಾಂಡವೇ ಹೊರತು ಸರ್ಕಾರ ಮಾಡಿದ್ದಲ್ಲ. ಸರ್ಕಾರ ಅವ್ಯವಹಾರ ಮಾಡಿದೆ ಎಂಬಂತೆ ಮಾತನಾಡಬೇಡಿ. ಅದೊಂದು ಸಾಂವಿಧಾನಿಕ ಸಂಸ್ಥೆ. ಈ ಸಂಸ್ಥೆಯಲ್ಲಿ ಹಗರಣ ನಡೆಯುತ್ತಿರುವುದು ಇದೇ ಮೊದಲಲ್ಲ ಎಂದು ಸಮರ್ಥನೆಗೆ ಮುಂದಾದರು.
ಮಧ್ಯ ಪ್ರವೇಶಿಸಿದ ಬಿಜೆಪಿಯ ಆರಗ ಜ್ಞಾನೇಂದ್ರ, ಬಸನಗೌಡ ಪಾಟೀಲ ಯತ್ನಾಳ್, ಕೆಪಿಎಸ್ಸಿ ಸಾಂವಿಧಾನಿಕ ಸಂಸ್ಥೆ ಆದರೆ, ದೇವಸ್ಥಾನ ಅಲ್ಲ. ನೀವು ಚುನಾವಣಾ ಆಯೋಗದ ಬಗ್ಗೆ ಆರೋಪ ಮಾಡುವಾಗ ಅದು ಸಾಂವಿಧಾನಿಕ ಸಂಸ್ಥೆ ಆಗಿರಲಿಲ್ಲವೆ? ನೀವು 40 ಪರ್ಸೆಂಟ್ ಆರೋಪ ಮಾಡಿದಾಗ ದಾಖಲೆ ಕೊಟ್ಟಿದ್ರಾ ಎಂದು ಟಾಂಗ್ ಕೊಟ್ಟರು. ಅದಕ್ಕೆ ಪ್ರತಿಯಾಗಿ ಎಚ್.ಕೆ. ಪಾಟೀಲ, ಚರ್ಚೆ ದಾರಿ ತಪ್ಪುತ್ತಿದೆ. ನಿರ್ದಿಷ್ಟ ಪ್ರಕರಣ ಇದ್ದರೆ ಹೇಳಿ ಎಂದರು. ಅದಾವುದಕ್ಕೂ ಕೇರ್ ಮಾಡದೆ ತಿರುಗೇಟು ನೀಡಿದ ಆರ್.ಅಶೋಕ್, ಉಪ್ಪಾರಪೇಟೆ ಠಾಣೆ ಹಾಗೂ ವಿಜಯನಗರ ಠಾಣೆಯಲ್ಲಿ ದಾಖಲಾದ ಪ್ರಕರಣಗಳನ್ನು ಉಲ್ಲೇಖಿಸಿ ಆಡಳಿತ ಪಕ್ಷದ ಸದಸ್ಯರ ಬಾಯಿ ಮುಚ್ಚಿಸಿದರು. 384 ಗೆಜೆಟೆಡ್ ಪ್ರೊಬೆಷನರ್ ಗ್ರೂಪ್ ಎ ಮತ್ತು ಗ್ರೂಪ್ ಬಿ ವೃಂದದ ಹುದ್ದೆ ನೇಮಕಕ್ಕೆ ಪೂರ್ವಭಾವಿ ಪರೀಕ್ಷೆ ನಡೆಸಿದಾಗ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡದ ಕಗ್ಗೊಲೆ ಆಗಿದೆ. ಆಗ ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಅನುವಾದದಿಂದಾಗಿ 59 ತಪ್ಪುಗಳಾಗಿದ್ದವು. ಸಿಎಂ ಟ್ವೀಟ್ ಮಾಡಿ ಮರು ಪರೀಕ್ಷೆ ಆದೇಶ ಮಾಡಿದರು. ಈಗ 79 ತಪ್ಪುಗಳಾಗಿವೆ. ಈ ತಪ್ಪು ಪ್ರಶ್ನೆಗಳನ್ನು ಓದಿ ಅರ್ಥ ಮಾಡಿಕೊಳ್ಳಲಾಗದೆ ಅನೇಕ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಸಮಸ್ಯೆ ಎದುರಿಸಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ಕೆಪಿಎಸ್ಸಿ ರೋಗಗ್ರಸ್ಥ ಸಂಸ್ಥೆಯಾಗಿದೆ. ಜನ ಹಾದಿ ಬೀದಿಯಲ್ಲಿ ಮಾತನಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಅಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆಯಾಗಿದೆ. ಎಸಿ, ತಹಸೀಲ್ದಾರ್, ಡಿವೈಎಸ್ಪಿ ಹೀಗೆ ಎಲ್ಲ ಹುದ್ದೆಗಳನ್ನು ಹರಾಜು ಕೂಗುತ್ತಾರೆ. 'ವಿದ್ಯೆ ದೊಡ್ಡಪ್ಪ, ಲಂಚ ಅವರಪ್ಪ' ಎನ್ನುವಂತಾಗಿದೆ. ಒಂದೊಂದು ಪರೀಕ್ಷೆಗೂ ಒಂದೊಂದು ಪ್ಯಾಕೇಜ್ ಇದೆ ಎಂದು ಅಶೋಕ್ ದೂರಿದರು. ಕೆಪಿಎಸ್ಸಿ ಕಳ್ಳರ ಸಂತೆಯಾಗಿದೆ. ಇಲ್ಲಿ 16 ಮಂದಿ ಸದಸ್ಯರಿದ್ದಾರೆ. ಪ್ರತಿಯೊಬ್ಬರಿಗೆ ಮಾಸಿಕ 2.50 ಲಕ್ಷ ರೂ. ಸಂಬಳ ಇತರೆ ಭತ್ಯೆ ಸೇರಿ 4 ಲಕ್ಷ ರೂ. ಖರ್ಚಾಗುತ್ತದೆ. ಆದರೆ, 25 ಕೋಟಿ ಜನಸಂಖ್ಯೆಯ ಉತ್ತರ ಪ್ರದೇಶದಲ್ಲಿ ಕೇವಲ 8 ಜನ ಸದಸ್ಯರಿದ್ದಾರೆ. ಎಸಿ ಹುದ್ದೆಗೆ 2 ಕೋಟಿ, ಡಿವೈಎಸ್ಪಿ ಹುದ್ದೆಗೆ 2 ಕೋಟಿ, ವಾಣಿಜ್ಯ ತೆರಿಗೆ ಇಲಾಖೆ ಹುದ್ದೆಗೆ 1.50 ಕೋಟಿ, ತಹಸೀಲ್ದಾರ್ ಹುದ್ದೆಗೆ 1 ಕೋಟಿ ರೂ. ವಸೂಲಿ ಮಾಡಲಾಗುತ್ತಿದೆ ಎಂದು ಅಶೋಕ್ ಆರೋಪಿಸಿದರು. ಮುದ್ದಣ-ಮನೋರಮೆ ಸಲ್ಲಾಪ: ಕೆಪಿಎಸ್ಸಿ ಪ್ರಶ್ನೆ ಪತ್ರಿಕೆಗಳ ತಪ್ಪುಗಳನ್ನು ಆರ್. ಅಶೋಕ ಅವರು ಓದುತ್ತಿದ್ದಾಗ, ಇದು ಯಾವ ಭಾಷೆ? ಯಾರಿಗೆ ಅರ್ಥವಾಗುತ್ತದೆ? ಎಂದು ಪ್ರಶ್ನಿಸಿದರೆ, ಇದು ಮುದ್ದಣ ಮನೋರಮೆಯರ ಸಲ್ಲಾಪ ಎಂದು ಲೇವಡಿ ಮಾಡಿದರು.
ರತ್ನನ್ ಪದ ಉಲ್ಲೇಖ: 'ನರಕಕ್ಕ್ ಇಳ್ಸಿ ನಾಲ್ಗೆ ಸೀಳ್ಸಿ, ಬಾಯ್ ಒಲಿಸಾಕಿದ್ರೂನೆ, ಮೂಗ್ನಲ್ ಕನ್ನಡ್ ಪದವಾಡ್ತೀನಿ!' ಎಂಬ ರತ್ನನ್ ಪದ ಉಲ್ಲೇಖಿಸಿದ ಅಶೋಕ್, ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡದ ಕೊಲೆಯಾಗಿದೆ. ಸ್ಪೀಕರ್ ಯು.ಟಿ.ಖಾದರ್ ಒಳಗೊಂಡಂತೆ ಸಿದ್ಧಗಂಗಾ ಶ್ರೀಗಳು, ಗೊ.ರು. ಚನ್ನಬಸಪ್ಪ, ಡಾ. ಬರಗೂರು ರಾಮಚಂದ್ರಪ್ಪ, ನಾರಾಯಣಗೌಡ, ಹಂಪ ನಾಗರಾಜಯ್ಯ, ಚಿನ್ನಸ್ವಾಮಿ, ಮಹೇಶ್ ಜೋಶಿ, ಪುರುಷೋತ್ತಮ ಬಿಳಿಮಲೆ ಸೇರಿದಂತೆ ಅನೇಕ ಗಣ್ಯರು ಮರು ಪರೀಕ್ಷೆ ನಡೆಸುವಂತೆ ಆಗ್ರಹಿಸಿದ್ದಾರೆ ಎಂದು ಸಭೆಯ ಗಮನ ಸೆಳೆದರು. ತಪ್ಪು ಮಾಡಿದ ಅಧಿಕಾರಿಯ ನಾಲಿಗೆ ಸೀಳಬೇಕು ಎಂದು ಹರಿಹಾಯ್ದರು.