ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕಾ ಯೋಜನೆಗಳಿಗೆ ತ್ವರಿತ ಗತಿಯಲ್ಲಿ ಅನುಮೋದನೆ ನೀಡಬಲ್ಲ ಮತ್ತು ಉದ್ಯಮಗಳಿಗೆ ಸಂಬಂಧಿಸಿದಂತೆ 30ಕ್ಕೂ ಹೆಚ್ಚು ಇಲಾಖೆಗಳ 150 ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುವಂತಹ ಉದ್ಯಮಸ್ನೇಹಿ ಪರಿಷ್ಕೃತ ಏಕಗವಾಕ್ಷಿ ಪೋರ್ಟಲ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾಗತಿಕ ಹೂಡಿಕೆದಾರರ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಿದರು.

ಮೈಕ್ರೋಸಾಫ್ಟ್ ಕಂಪನಿಯ ನೆರವಿನೊಂದಿಗೆ ಅತ್ಯಾಧುನಿಕ ತಂತ್ರಜ್ಞಾನದ ಬಲದಿಂದ ರೂಪಿಸಿರುವ ಈ ವ್ಯವಸ್ಥೆಯು ಕೈಗಾರಿಕಾ ಯೋಜನೆಗಳಿಗೆ ಸಂಬಂಧಿಸಿದ ಅನುಮೋದನೆ, ನವೀಕರಣ, ತಿದ್ದುಪಡಿ, ಕುಂದುಕೊರತೆಗಳಿಗೆ ಪರಿಹಾರಗಳನ್ನು ಸರಳಗೊಳಿಸಲಿದ್ದು, ಕ್ಷಿಪ್ರಗತಿಯಲ್ಲಿ ಹೂಡಿಕೆ ನನಸಾಗುವಂತೆ ಮಾಡಲಿದೆ. ಜತೆಗೆ ಹೂಡಿಕೆದಾರರಿಗೆ ಕೇಂದ್ರ ಸರಕಾರದ ಮಟ್ಟದಲ್ಲಿ ಸಿಗಬೇಕಾದ ಸೇವೆಗಳನ್ನು ಕೂಡ ಇದರ ಮೂಲಕ, ಅಧಿಕಾರಿಶಾಹಿಯ ಅಡೆತಡೆಯಿಲ್ಲದೆ ಪಡೆದುಕೊಳ್ಳಬಹುದು.

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ, ಇದುವರೆಗೂ ಕೈಗಾರಿಕಾ ಯೋಜನೆಗಳಿಗೆ ಸಂಬಂಧಿಸಿದ ಸೇವೆಗಳು ಬೇರೆಬೇರೆ ಇಲಾಖೆಗಳಲ್ಲಿ ಚದುರಿ ಹೋಗಿದ್ದವು. ಇದರಿಂದ ಎಲ್ಲವೂ ಮಂದಗತಿಗೆ ಸಿಲುಕಿ ಸ್ತಬ್ಧವಾಗುತ್ತಿದ್ದವು. ಈಗ ರಾಜ್ಯ ಸರಕಾರದ 30 ಇಲಾಖೆಗಳ ಎಲ್ಲ ಸೇವೆಗಳನ್ನೂ ಒಂದೆಡೆ ತರಲಾಗಿದೆ. ಕೃತಕ ಬುದ್ಧಿಮತ್ತೆಯನ್ನು ಆಧರಿಸಿ ವಿನ್ಯಾಸಗೊಳಿಸಿರುವ ಚಾಟ್-ಬಾಟ್ ಸೌಲಭ್ಯದಲ್ಲಿ ಉದ್ಯಮಿಗಳು ತಮಗೆ ಬೇಕಾದ ಸೇವೆ/ಮಾಹಿತಿಗಳನ್ನು ತಮ್ಮ ಇಷ್ಟದ ಭಾಷೆಯಲ್ಲಿ ಬೆರಳತುದಿಯಲ್ಲೇ ಪಡೆದುಕೊಳ್ಳಬಹುದು. ಈ ಸೇವೆಗಳು ಮೊಬೈಲಿನಲ್ಲಿ ಕೂಡ ಸಿಗಲಿವೆ ಎಂದು ವಿವರಿಸಿದ್ದಾರೆ.

ಈ ಏಕಗವಾಕ್ಷಿ ವ್ಯವಸ್ಥೆಯಡಿ `ಕರ್ನಾಟಕ ಉದ್ಯೋಗ ಮಿತ್ರ’ದ ಮೂಲಕ ಹೂಡಿಕೆದಾರರಿಗೆ ಪ್ರಮಾಣಪತ್ರ ಆಧರಿತ ಅನುಮೋದನೆ (ಎಬಿಸಿ) ನೀಡಲಾಗುವುದು. ಹೀಗಾಗಿ ಉದ್ಯಮಿಗಳು ಅನುಮೋದನೆಗಳಿಗೆ ಕಾಯದೆ, ತಕ್ಷಣವೇ ಕಟ್ಟಡ ಕಾಮಗಾರಿ ಮತ್ತು ಇತರೆ ಸಿದ್ಧತೆ ಆರಂಭಿಸಬಹುದು. ಈ ವ್ಯವಸ್ಥೆಯನ್ನು ರಾಷ್ಟ್ರ ಮಟ್ಟದ ಏಕಗವಾಕ್ಷಿ ವ್ಯವಸ್ಥೆಯೊಂದಿಗೆ ಬೆಸೆಯಲಾಗಿದೆ. ಈ ಪೋರ್ಟಲ್ಲಿನಲ್ಲಿ ಕೈಗಾರಿಕೆಗೆ ಬೇಕಾದ ಭೂಮಿಯ ಹುಡುಕಾಟ, ಮಂಜೂರಾತಿ, ಕಟ್ಟಡ ನಕಾಶೆಗೆ ಅನುಮೋದನೆ ಮುಂತಾದ ಕೆಐಎಡಿಬಿ ಸೇವೆಗಳೂ ಸಿಗಲಿವೆ ಎಂದು ಅವರು ನುಡಿದಿದ್ದಾರೆ.

ಹೊಸ ವ್ಯವಸ್ಥೆಯಲ್ಲಿ ಜಿಐಎಸ್ ಆಧರಿತ ಕೈಗಾರಿಕಾ ಮಾಹಿತಿಯನ್ನೂ ಒದಗಿಸಲಾಗುವುದು. ಹೀಗಾಗಿ ಕೈಗಾರಿಕೆಗೆ ತಮ್ಮ ಸ್ವಂತ ಅಥವಾ ಕಂದಾಯ ಭೂಮಿಯನ್ನು ಉಪಯೋಗಿಸಿಕೊಳ್ಳುವವರಿಗೆ ಅನುಕೂಲವಾಗಲಿದೆ. ನಿರಾಕ್ಷೇಪಣಾ ಪತ್ರ ಇತ್ಯಾದಿಗಳಿಗೆ ವಿಝರ್ಡ್ ತಂತ್ರಜ್ಞಾನವನ್ನುಳ್ಳ ಸಾಧನ ಇದರಲ್ಲಿದೆ. ಹಾಗೆಯೇ, ಉದ್ಯಮಿಗಳು ತಮಗೆ ಸಿಗಲಿರುವ ಪ್ರೋತ್ಸಾಹನಾ ಭತ್ಯೆ, ರಿಯಾಯಿತಿ ಮತ್ತು ವಿನಾಯಿತಿಗಳನ್ನು `ವಿಝರ್ಡ್ ಮತ್ತು ಕ್ಯಾಲ್ಕ್ಯುಲೇಟರ್’ ಮೂಲಕ ತಿಳಿದುಕೊಳ್ಳಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.

Ads in Post

Author:

...
Nanje Gowda SS

Administrator

I'm a dedicated news author with a passion for storytelling and a commitment to uncovering the truth. With more than 5 years of experience in journalism, I’ve covered a wide range of topics, from local stories that shape our communities to global events that impact the world at large.

No Reviews