ದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಪ್ರವಾಸದಲ್ಲಿರುವ ಕತಾರ್ ಅಮೀರ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರನ್ನು ಮಂಗಳವಾರ ದೆಹಲಿಯ ಹೈದರಾಬಾದ್ ಹೌಸ್ನಲ್ಲಿ ಭೇಟಿ ಮಾಡಿ, ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಇಂದು ದೆಹಲಿಯ ಹೈದರಾಬಾದ್ ಹೌಸ್ನಲ್ಲಿ ಉಭಯ ನಾಯಕರ ನಿಯೋಗ ದ್ವಿಪಕ್ಷೀಯ ಮಾತುಕತೆ ನಡೆಸಿತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಎಸ್ ಜೈಶಂಕರ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಹಲವಾರು ಹಿರಿಯ ಸಚಿವರು ಭಾರತದ ನಿಯೋಗದಲ್ಲಿದ್ದರು. ಕತಾರ್ ನಿಯೋಗದ ನೇತೃತ್ವವನ್ನು ಕತಾರ್ ಅಮೀರ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರು ವಹಿಸಿದ್ದರು. ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಕತಾರ್ ಅಮೀರ್ ಅವರಿಗೆ ಗಾರ್ಡ್ ಆಫ್ ಹಾನರ್ ಮತ್ತು ವಿಧ್ಯುಕ್ತ ಸ್ವಾಗತ ನೀಡಲಾಯಿತು.
ಕತಾರ್ ಅಮೀರ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಹಾಗೂ ಹಿರಿಯ ಸಚಿವರು ಸ್ವಾಗತಿಸಿದರು. ಕತಾರ್ನ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರು ಎರಡು ದಿನಗಳ ಭಾರತ ಭೇಟಿಗಾಗಿ ಸೋಮವಾರ ದೆಹಲಿಗೆ ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಖುದ್ದು ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ತೆರಳಿ ಕತಾರ್ನ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರನ್ನು ಬರಮಾಡಿಕೊಂಡರು. ಪ್ರಧಾನಿ ಮೋದಿ ಅವರ ಆಹ್ವಾನದ ಮೇರೆಗೆ ಕತಾರ್ ಅಮೀರ್ ಭಾರತಕ್ಕೆ ಎರಡು ದಿನಗಳ ಭೇಟಿ ನೀಡಿದ್ದಾರೆ. ಇದು ಕತಾರ್ ಅಮೀರ್ ಭಾರತಕ್ಕೆ ನೀಡುತ್ತಿರುವ ಎರಡನೇ ಭೇಟಿಯಾಗಿದೆ. ಅವರು ಈ ಹಿಂದೆ ಮಾರ್ಚ್ 2015ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು.