ಗ್ರಾಮೀಣ ಜನರ ಜೀವನವನ್ನು ನಿರ್ಮಾಣ ಮಾಡುತ್ತಿರುವ ಉದ್ಯೋಗ ಖಾತ್ರಿ ಯೋಜನೆಯಾದ ನರೇಗಾ ಕಾರ್ಯಕ್ರಮದಲ್ಲಿ 100 ಮಾನವ ದಿನಗಳನ್ನು 150 ಮಾನವ ದಿನಗಳಿಗೆ ಏರಿಸಲು ತಾವು ಕೇಂದ್ರ ಸರ್ಕಾರಕ್ಕೆ ಮಾಡಿದ ಮನವಿಯ ಬಗ್ಗೆ ಗಮನ ಹರಿಸದಿರುವುದು ಅತ್ಯಂತ ಬೇಸರದ ಸಂಗತಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಬೆಂಗಳೂರಿನಲ್ಲಿ ಇಂದು ಏರ್ಪಡಿಸಿದ್ದ ನರೇಗಾ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ , ಯೋಜನೆಯನ್ನು ಅತ್ಯುತ್ತಮವಾಗಿ ಅನುಷ್ಠಾನ ಮಾಡಿದ ಮೂರು ಹಂತದ ಪಂಚಾಯತಿಗಳು ಹಾಗೂ ಅನುಷ್ಠಾನ ಇಲಾಖೆಗಳಿಗೆ ಸಚಿವರು ಪ್ರಶಸ್ತಿ ವಿತರಿಸಿ ಮಾತನಾಡುತ್ತಿದ್ದರು.

ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ದೂರದೃಷ್ಟಿ ಹಾಗೂ ಸಂಕಲ್ಪವನ್ನಿರಿಸಿಕೊಂಡು 2005ರಲ್ಲಿ ಅಂದಿನ ಪ್ರಧಾನಮಂತ್ರಿಗಳಾಗಿದ್ದ ಮನಮೋಹನ್‌ ಸಿಂಗ್‌ ಅವರು ನರೇಗಾ ಕಾರ್ಯಕ್ರಮವನ್ನು ಜಾರಿಗೆ ತಂದರು. ಈ ಕಾರ್ಯಕ್ರಮ ಇಂದು ಗ್ರಾಮೀಣ ಜನರ ಜೀವನೋಪಾಯವಾಗಿ ಉಳಿಯದೇ ಜೀವನ ನಿರ್ಮಾಣ ಮಾಡುವ ಕಾರ್ಯಕ್ರಮವಾಗಿದೆ, ರಾಜ್ಯದಲ್ಲಿ ಶೇ.54ರಷ್ಟು ಮಹಿಳೆಯರು ಉದ್ಯೋಗ ಖಾತ್ರಿ ಯೋಜನೆಗಳಲ್ಲಿ ತೊಡಗಿಕೊಂಡಿದ್ದಾರೆ, ಈ ಯೋಜನೆಯಡಿ ಸರ್ಕಾರ ಮಹಿಳೆಯರು ಹಾಗೂ ಪುರುಷರಿಗೆ ತಾರತಮ್ಯವಿಲ್ಲದೆ ವೇತನ ನೀಡುತ್ತಿವುದರೊಂದಿಗೆ ಬಸವಣ್ಣನವರ ಸರ್ವರಿಗೂ ಸಮಪಾಲು, ಸಮಬಾಳು ತತ್ತ್ವವನ್ನು ಪಾಲಿಸುತ್ತಿದೆ, ನರೇಗಾ ಯೋಜನೆ ಗ್ರಾಮೀಣ ಕುಟುಂಬಗಳಲ್ಲಿ ಆರ್ಥಿಕ ಸ್ಥಿರತೆ ತಂದು ಕೊಟ್ಟಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ಸಂವಿಧಾನ ಪೀಠಿಕೆಯಲ್ಲಿರುವಂತೆ ಗ್ರಾಮಗಳಲ್ಲಿ ಇಂದು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಮಾನತೆ ಪಾಲನೆಯಾಗುತ್ತಿದೆ, ಗ್ರಾಮ ಪಂಚಾಯತಿಗಳೇ ಸರ್ಕಾರಗಳಾಗಿ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಕೊಂಡಿವೆ, ನರೇಗಾ ಕಾರ್ಯಕ್ರಮಗಳಡಿ ರಾಜ್ಯದಲ್ಲಿ 17 ಲಕ್ಷ ಆಸ್ತಿಗಳನ್ನು ಸೃಷ್ಟಿ ಮಾಡಲಾಗಿದೆ, ಇವು ಗ್ರಾಮೀಣ ಭಾಗಕ್ಕೆ ಶಾಶ್ವತ ಕೊಡುಗೆಗಳಾಗಿವೆ ಎಂದು ಶ್ಲಾಘನೆ ವ್ಯಕ್ತಪಡಿಸಿದ ಸಚಿವರು ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುತ್ತಿರುವ ನರೇಗಾ ಅನುದಾನವನ್ನು ವರ್ಷ ವರ್ಷವೂ ಕಡಿತಗೊಳಿಸುತ್ತಾ ಹೋಗುತ್ತಿದೆ, ಇದು ಗ್ರಾಮೀಣ ಅಭಿವೃದ್ಧಿಗೆ ಧಕ್ಕೆ ತರಲಿದೆ ಎಂದೂ ಹೇಳಿದರು. ಗ್ರಾಮ ಪಂಚಾಯತಿಗಳು ವೈಜ್ಞಾನಿಕವಾಗಿ ಹಾಗೂ ಪ್ರಜ್ಞಾವಂತಿಕೆಯಿಂದ ಕಾರ್ಯ ನಿರ್ವಹಿಸುದರೊಂದಿಗೆ ಗ್ರಾಮಗಳನ್ನು ಮತ್ತಷ್ಟು ಅಭಿವೃದ್ಧಿ ಮಾಡಲು ಮುಂದಾಗಬೇಕೆಂದು ಸಲಹೆ ಮಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ವಿಧಾನಪರಿಷತ್ತಿನ ಸಭಾಪತಿಗಳದ ಬಸವರಾಜ ಹೊರಟ್ಟಿ ಅವರು ಗ್ರಾಮೀಣಾಬಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ಕೂಸಿನ ಮನೆಗಳನ್ನು ಆರಂಭಿಸುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ದುಡಿಯುವ ಮಹಿಳೆಯರಿಗೆ ಒತ್ತಾಸೆಯಾಗಿದೆ ಎಂದು ಹೇಳಿದರು.

ಕಿಯೊನಿಕ್ಸ್‌ ಅಧ್ಯಕ್ಷರೂ ಆದ ಹೊಸಕೋಟೆ ಶಾಸಕ ಶರತ್‌ ಬಚ್ಚೇಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು ಸಂವಿಧಾನದ ಆಶಯದಂತೆ ಭಾರತದ ಪ್ರಧಾನಮಂತ್ರಿಗಳಾಗಿದ್ದ ಮನಮೋಹನ ಸಿಂಗ್‌ ಅವರು ಜಾರಿಗೆ ತಂದ ನರೇಗಾ ಕಾರ್ಯಕ್ರಮ ಇಂದು ಗ್ರಾಮೀಣ ಜನ ಜೀವನದ ಅನಿವಾರ್ಯ ಭಾಗವಾಗಿ ಪರಿಣಮಿಸಿದೆ ಎಂದು ಹೇಳಿದರು.

ಶಿವಾಜಿನಗರ ಶಾಸಕ ರಿಜ್ವಾನ್‌ ಅರ್ಷದ್‌ ಅಧ್ಯಕ್ಷತೆವಹಿಸಿದ್ದರು. ಸಚಿವರು ರಾಜ್ಯದ ವಿವಿಧ ಪಂಚಾಯತ್‌ ರಾಜ್‌ ಸಂಸ್ಥೆಗಳು ಆಯೋಜಿಸಿದ್ದ ಪ್ರದರ್ಶನ ಮಳಿಗೆಗಳನ್ನು ವೀಕ್ಷಿಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಉಮಾ ಮಹದೇವನ್‌ ಮತ್ತು ಅಂಜುಂ ಪರವೇಜ್‌, ನರೇಗ ಆಯುಕ್ತ ಪವನ್‌ ಕುಮಾರ್‌ ಮಾಲಪಾಟಿ, ಪಂಚಾಯತ್‌ ರಾಜ್‌ ಆಯುಕ್ತೆ ಡಾ.ಅರುಂಧತಿ ಚಂದ್ರಶೇಖರ್‌, ಗ್ರಾಮೀಣ ನೀರು ಸರಬರಾಜು ಇಲಾಖೆ ನಿರ್ದೇಶಕ ಕೆ.ನಾಗೇಂದ್ರ ಪ್ರಸಾದ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Ads in Post

Author:

...
Nanje Gowda SS

Administrator

I'm a dedicated news author with a passion for storytelling and a commitment to uncovering the truth. With more than 5 years of experience in journalism, I’ve covered a wide range of topics, from local stories that shape our communities to global events that impact the world at large.

No Reviews