ಹಚ್ಚೆ ಹಾಕಿಕೊಳ್ಳುವವರ ಸಂಖ್ಯೆ ಜಾಸ್ತಿಯಾಗುತ್ತಿದ್ದಂತೆ ಗಲ್ಲಿ ಗಲ್ಲಿಗಳಲ್ಲಿ ಹಚ್ಚೆ ಅಂಗಡಿಗಳು ಕೂಡ ತಲೆ ಎತ್ತುತ್ತಿದೆ. ಇದರಿಂದಾಗಿ ಯುವಕ, ಯುವತಿಯರು ಹೋದಕಡೆಯೆಲ್ಲಾ ದೇಹದ ಮೇಲೆ ದೊಡ್ಡ ದೊಡ್ಡ ಹಚ್ಚೆಗಳನ್ನು ಹಾಕಿಸಿಕೊಳ್ಳಲು ಆರಂಭಿಸಿದ್ದಾರೆ. ಆದರೆ ಇದರಿಂದ ಉಂಟಾಗುವ ಅಪಾಯದ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಹಚ್ಚೆ ಅಥವಾ ಟ್ಯಾಟೂ ಹಾಕಿಸಿಕೊಳ್ಳುವ ಟ್ರೆಂಡ್ ಹುಟ್ಟಿಕೊಂಡಿದೆ. ಹಿಂದೆಯೆಲ್ಲಾ ಹಚ್ಚೆ ಹಾಕುವ ಸಂಪ್ರದಾಯವಿತ್ತಾದರೂ ಇಷ್ಟು ಜನಪ್ರಿಯವಾಗಿರಲಿಲ್ಲ. ಈಗ ಇದೊಂದು ರೀತಿಯ ಸ್ಕಿನ್ ಆರ್ಟ್ ಆಗಿದೆ. ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರ ವರೆಗೆ ಈ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆದರೆ ಇಷ್ಟ ಪಟ್ಟು ಟ್ಯಾಟೂ ಹಾಕಿಸಿಕೊಳ್ಳುವವರಿಗೆ ಆಘಾತಕಾರಿ ಸುದ್ದಿಯೊಂದು ವೇಗವಾಗಿ ಬಿತ್ತರಿಸಿದ್ದು ಜನರು ಈ ಬಗ್ಗೆ ಎಚ್ಛೆತ್ತುಕೊಳ್ಳುವುದು ಅನಿವಾರ್ಯವಾಗಿದೆ. ಹಾಗಾದರೆ ಇದರಿಂದ ಉಂಟಾಗುವ ತೊಂದರೆಗಳೇನು? ಈ ರೀತಿಯ ಹಚ್ಚೆಗಳೊಂದಿಗೆ ಎಚ್ಐವಿ ಮತ್ತು ಕ್ಯಾನ್ಸರ್ ಅಪಾಯವನ್ನು ನಿಯಂತ್ರಿಸಲು ಹೊಸ ನಿಯಮಗಳನ್ನು ತರುವಂತೆ ಕರ್ನಾಟಕ ಆರೋಗ್ಯ ಸಚಿವರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.
ಹಚ್ಚೆಗಳಿಗೆ ಬಳಸುವ ಶಾಯಿಯಿಂದ ಉಂಟಾಗುವ ಪರಿಣಾಮವನ್ನು ತಡೆಯುವುದರ ಜೊತೆಗೆ ಅಲ್ಲಲ್ಲಿ ಕಾಣಸಿಗುವ ಹಚ್ಚೆ ಪಾರ್ಲರ್ಗಳನ್ನು ನಿಯಂತ್ರಿಸಲು ಕಾನೂನನ್ನು ಜಾರಿಗೆ ತರುವ ಅವಶ್ಯಕತೆಯಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ, ಚರ್ಮದ ಕ್ಯಾನ್ಸರ್ ಮತ್ತು ಎಚ್ಐವಿ ಹೈಪರ್ಟಿಸ್ನಂತಹ ಮಾರಣಾಂತಿಕ ಕಾಯಿಲೆಗಳು ಹೆಚ್ಚುತ್ತಿರುವುದಕ್ಕೆ ಹಚ್ಚೆಗಳು ಒಂದು ಕಾರಣವಾಗಿದೆ.
ಟ್ಯಾಟೂ ಹಾಕಿಸುವ ಮೊದಲು ಈ ಅಂಶ ಮರೆಯಬೇಡಿ
ಹಾಗಾಗಿ ಹಚ್ಚೆ ಹಾಕಿಸಿಕೊಳ್ಳುವ ಮನಸ್ಸಿದ್ದರೆ ಅದನ್ನು ಹಾಕಿಕೊಂಡ ತಕ್ಷಣ, ಚರ್ಮ ಯಾವುದೇ ರೀತಿಯ ಸೋಂಕಿಗೆ ಒಳಗಾಗದಂತೆ ಕಾಳಜಿ ವಹಿಸುವುದು ಕೂಡ ಬಹಳ ಮುಖ್ಯ. ಮೊದಲು, ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ಅದರ ನಿರ್ವಹಣೆ ಸಾಧ್ಯವೇ ಎಂಬುದನ್ನು ಯೋಚಿಸಿ. ಈ ಬಗ್ಗೆ ನಿರ್ಲಕ್ಷಿಸಿದಲ್ಲಿ, ನಾನಾ ಬಗೆಯ ಚರ್ಮದ ಸೋಂಕಿಗೆ ಒಳಗಾಗಬಹುದು. ಹಾಗಾಗಿ ಸುತ್ತಮುತ್ತಲ ಚರ್ಮ ವಾಸಿಯಾಗುವ ತನಕ ವಿಶೇಷ ಆರೈಕೆ ತೆಗೆದುಕೊಳ್ಳಬೇಕಾಗುತ್ತದೆ ಎಂಬುದನ್ನು ಮರೆಯಬೇಡಿ.
ಯಾರಿಗಾಗಿಯೂ ಹಚ್ಚೆ ಹಾಕಿಸಿಕೊಳ್ಳಬೇಡಿ. ಇನ್ನು ಟ್ಯಾಟೂ ಯಾವ ಭಾಗಕ್ಕೆ ಹಾಕಬೇಕು ಎಂದು ಮೊದಲೇ ನಿರ್ಧರಿಸಿ, ಯಾವ ವಿನ್ಯಾಸಬೇಕು, ಎಷ್ಟು ದೊಡ್ಡದಿರಬೇಕು ಇವೆಲ್ಲಾ ಸ್ಪಷ್ಟವಾಗಿರಲಿ. ಇನ್ನು ಟ್ಯಾಟೂ ಹಾಕಿಸುವಲ್ಲಿ ಸೂಜಿಯನ್ನು ಅವರು ಸ್ವಚ್ಛ ಮಾಡುತ್ತಿದ್ದಾರೆಯೇ ಎಂದು ಖಾತರಿಪಡಿಸಿಕೊಂಡ ಬಳಿಕವೇ ಟ್ಯಾಟೂ ಹಾಕಿಸಿಕೊಳ್ಳಿ.
ಇನ್ನು ಸ್ವಲ್ಪ ಸಮಯಕ್ಕೆ ಸಾಕು ಎಂದಾದರೆ ತಾತ್ಕಾಲಿಕ ಟ್ಯಾಟೂ ಹಾಕಿಸಿಕೊಳ್ಳಿ. ಇದಾದರೆ ಸ್ವಲ್ಪ ದಿನದ ಬಳಿಕ ಹೋಗುತ್ತದೆ ಹಾಗೂ ನಿಮಗೆ ಇಷ್ಟಬಂದ ಹೊಸತೊಂದು ಟ್ಯಾಟೂ ಹಾಕಿಸಿಕೊಳ್ಳಬಹುದು.