7 ಲಕ್ಷ ಕೋಟಿ ಬಂಡವಾಳ ಹರಿವು ದೃಢ; 18 ರಾಷ್ಟ್ರಗಳು ಸಮಾವೇಶದಲ್ಲಿ ಭಾಗಿ ಕರ್ನಾಟಕ ರಾಜ್ಯ ನೂತನ ಕೈಗಾರಿಕಾ ನೀತಿ ಘೋಷಣೆ

ಬೆಂಗಳೂರು : "ಇನ್ವೆಸ್ಟ್ ಕರ್ನಾಟಕ 2025" ಜಾಗತಿಕ ಹೂಡಿಕೆದಾರರ ಸಮಾವೇಶದ ಮೂಲಕ ರಾಜ್ಯದಲ್ಲಿ ಸುಮಾರು ₹10 ಲಕ್ಷ ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆಯಾಗಬಹುದು ಎಂದು ಅಂದಾಜು ಮಾಡಲಾಗಿದೆ. ಇಲ್ಲಿಯವರೆಗೂ ಸುಮಾರು ₹7 ಲಕ್ಷ ಕೋಟಿ ಬಂಡವಾಳದ ಹರಿವನ್ನು ದೃಢೀಕರಿಸಲಾಗಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

"ಇನ್ವೆಸ್ಟ್ ಕರ್ನಾಟಕ 2025"ರ ಕುರಿತು ವಿಧಾನಸೌಧದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಿದ್ಧತಾ ಪರಿಶೀಲನೆ ಸಭೆ ನಂತರ ಅವರು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು.

“60 ಕ್ಕೂ ಹೆಚ್ಚು ಗಣ್ಯ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಇವರು ನಾನಾ ವಿಚಾರಗಳನ್ನು ಹಂಚಿಕೊಳ್ಳಲಿದ್ದು, 2 ಸಾವಿರದಷ್ಟು ಹೂಡಿಕೆದಾರರು ಸಮಾವೇಶದಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಂಡಿದ್ದಾರೆ. 18 ರಾಷ್ಟ್ರಗಳು ಸಮಾವೇಶದಲ್ಲಿ ಭಾಗವಹಿಸಲಿದ್ದು, 9 ದೇಶಗಳು ತಮ್ಮ ಪೆವಿಲಿಯನ್ ಗಳನ್ನು ತೆರಯಲು ಮುಂದೆ ಬಂದಿದ್ದಾರೆ. 10 ದೇಶಗಳ ಉನ್ನತ ಮಟ್ಟದ ಕೈಗಾರಿಕಾ ವಲಯದ ನಾಯಕರು ತಾಂತ್ರಿಕ ವಲಯದ ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ” ಎಂದು ಹೇಳಿದರು.

“ಕರ್ನಾಟಕ ರಾಜ್ಯ ನೂತನ ಕೈಗಾರಿಕಾ ನೀತಿ 2025-30 ಅನ್ನು ಈ ಸಮಾವೇಶದಲ್ಲಿ ಘೋಷಣೆ ಮಾಡಲಾಗುವುದು. ದೇಶದ ಅನೇಕ ರಾಜ್ಯಗಳ ನೀತಿಗಳನ್ನು ಅಧ್ಯಯನ ಮಾಡಲಾಗಿದ್ದು ಎಲ್ಲದಕ್ಕಿಂತ ಉತ್ತಮವಾದ, ಆಕರ್ಷಣೀಯವಾದ ನೀತಿಯನ್ನು ಪರಿಚಯಿಸಲಾಗುವುದು. ಜೊತೆಗೆ ಕ್ಲೀನ್ ಮೊಬಿಲಿಟಿ ನೀತಿ 2025-30 ಅನ್ನು ಅನಾವರಣ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ ಏಕಗವಾಕ್ಷಿ ಅನುಕೂಲತೆಯನ್ನು ತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೂಡಿಕೆದಾರರು ಮತ್ತು ಖರೀದಿದಾರರ ನಡುವೆ ಹೊಂದಾಣಿಕೆ ಏರ್ಪಡಿಸುವ ಕೆಲಸ ಮಾಡಲಾಗುವುದು. 4 ಸಾವಿರ ಎಸ್ ಎಂಇಗಳಿಗೆ ಇಲಾಖೆ ವತಿಯಿಂದ ತರಬೇತಿ ನೀಡಿ ಸಮಾವೇಶಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ” ಎಂದರು.

*ಮೂರು ಲಕ್ಷ ಡಾಲರ್ ಮೊತ್ತದ ಬಹುಮಾನ ವಿತರಣೆ*

“ಅನೇಕ ಹೂಡಿಕೆದಾರರು ಬೆಂಗಳೂರು ಸೇರಿದಂತೆ ಹೊರಗಿನ ಜಿಲ್ಲೆಗಳಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿಗೆ ಒತ್ತನ್ನು ನೀಡಿದ್ದಾರೆ. ಇವರಿಗೆ ಮೂರು ಲಕ್ಷ ಡಾಲರ್ ಮೊತ್ತದ ಬಹುಮಾನ ನೀಡಲಾಗುವುದು. ನವೋದ್ಯಮಗಳ ಪ್ರತಿ ವಿಭಾಗಕ್ಕೆ ಒಟ್ಟು 1 ಲಕ್ಷ ಡಾಲರ್ ಬಹುಮಾನ ಮೊತ್ತ ನಿಗದಿ ಮಾಡಲಾಗಿದೆ” ಎಂದು ಹೇಳಿದರು.

“ಸುಮಾರು 30 ಕ್ಕೂ ಹೆಚ್ಚು ನವ ನವೀನ ರೀತಿಯ ಆಲೋಚನೆ ಹೊಂದಿರುವ ನವೋದ್ಯಮಗಳು ಕರ್ನಾಟಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಭಾಗವಹಿಸುತ್ತಿವೆ. ಸುಮಾರು 1 ಸಾವಿರಕ್ಕೂ ಹೆಚ್ಚು ನವೋದ್ಯಮಗಳಿಂದ ಪ್ರದರ್ಶನಕ್ಕೆ ಅರ್ಜಿಗಳು ಬಂದಿದ್ದವು. ಇವರಲ್ಲಿ ವಿನೂತನ ಚಿಂತನೆಗಳನ್ನು ಹೊಂದಿರುವ 45 ನವೋದ್ಯಮಗಳಿಗೆ ಅವಕಾಶ ಕಲ್ಪಿಸಲಾಗಿದೆ” ಎಂದರು.

“ಒಟ್ಟು 85 ಮಳಿಗೆಗಳು ಇರಲಿದ್ದು ಇಲ್ಲಿ ವಸ್ತುಪ್ರದರ್ಶನಕ್ಕೆ, ಮಾಹಿತಿ ಸಂವಹನಕ್ಕೆ ಅವಕಾಶ ಕಲ್ಪಿಸಲಾಗುವುದು. ತಾಂತ್ರಿಕ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಸರ್ಕಾರ ಬೆಂಗಳೂರಿಗಿಂತ ಇತರೇ ಜಿಲ್ಲೆಗಳಲ್ಲಿ ಹೆಚ್ಚು ಬಂಡವಾಳ ಹೂಡಿಕೆಗೆ ಪ್ರೋತ್ಸಾಹ ನೀಡುತ್ತಿದೆ. ಬೆಂಗಳೂರಿಗಿಂತ ಹೊರಗಿನ ಜಿಲ್ಲೆಗಳಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿ ಮಾಡಬೇಕು ಎಂದು ಎಲ್ಲಾ ಹೂಡಿಕೆದಾರರಿಗೆ ಮನವಿ ಮಾಡಲಾಗಿದೆ” ಎಂದು ತಿಳಿಸಿದರು.

“ಇದೇ ಫೆ. 11 ರಿಂದ 14 ನೇ ತಾರೀಕಿನ ತನಕ ನಡೆಯುವ ಸಮಾವೇಶದ ಯಶಸ್ಸಿಗೆ ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್ ಅವರ ನೇತೃತ್ವದ ತಂಡ ಸುಮಾರು 16 ದೇಶಗಳಿಗೆ ಭೇಟಿ ಮಾಡಿ ಅನೇಕರಿಗೆ ಆಹ್ವಾನ ನೀಡಿ ನಮ್ಮ ಕರ್ನಾಟಕದಲ್ಲಿರುವ ಮಾನವ ಸಂಪನ್ಮೂಲ, ಸಂಪತ್ತು ಸರ್ಕಾರದ ಅನುಕೂಲಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಫೆ.11 ರಂದು ಉದ್ಘಾಟನೆಯಾದ ನಂತರ ಒಂದಷ್ಟು ಒಡಂಬಡಿಕೆಗಳಿಗೆ ಸಹಿ ಹಾಕುವ ಕಾರ್ಯಕ್ರಮವಿರಲಿದೆ” ಎಂದರು.

“ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಮುನ್ನುಡಿ ಬರೆದಿದ್ದೇ ಕರ್ನಾಟಕ. ಮೊದಲನೇ ಬಾರಿ ವಿಧಾನಸೌಧದ ಬಾಂಕ್ವೆಂಟ್ ಹಾಲ್ ನಲ್ಲಿ ಇದನ್ನು ನಡೆಸಲಾಗಿತ್ತು. ಇದನ್ನು ಗಮನಿಸಿದ ಅನೇಕ ರಾಜ್ಯಗಳು ಇದನ್ನು ಅನುಕರಣೆ ಮಾಡಿದ್ದವು. ಕರ್ನಾಟಕ ಸರ್ಕಾರದ ಮೇಲೆ ನಂಬಿಕೆಯನ್ನಿಟ್ಟು ಬರುತ್ತಿರುವ ಎಲ್ಲಾ ಹೂಡಿಕೆದಾರರಿಗೆ ಅಭಿನಂದನೆಗಳು. ಎಲ್ಲಾ ರೀತಿಯಲ್ಲಿಯೂ ಕರ್ನಾಟಕ ಪ್ರಜ್ವಲಿಸಲಿದೆ. ಉದ್ಯೋಗ ಸೃಷ್ಟಿ ಸೇರಿದಂತೆ ಉತ್ಪಾದನೆಗೆ ಅನುಕೂಲಕರ ವಾತಾವರಣ ಉಂಟಾಗಲಿದೆ ಎಂಬುದು ನಮ್ಮ ನಂಬಿಕೆ” ಎಂದು ಹೇಳಿದರು.

Ads in Post

Author:

...
Nanje Gowda SS

Administrator

I'm a dedicated news author with a passion for storytelling and a commitment to uncovering the truth. With more than 5 years of experience in journalism, I’ve covered a wide range of topics, from local stories that shape our communities to global events that impact the world at large.

No Reviews