ಬೆಂಗಳೂರು: ವಿಶ್ವ ದರ್ಜೆಯ ಮೂಲಸೌಕರ್ಯ ಮತ್ತು ಕಾರ್ಯ ಪರಿಸರ ಹೊಂದಿರುವ ಕರ್ನಾಟಕವು ಬಂಡವಾಳ ಹೂಡಿಕೆಗೆ ಹೇಳಿಮಾಡಿಸಿದ ರಾಜ್ಯವಾಗಿದೆ. ಹೂಡಿಕೆದಾರರು ಇಲ್ಲಿ ಬಂಡವಾಳ ಹೂಡಿದರೆ ಇಡೀ ದೇಶವೇ ಅವರ ಬೆನ್ನಿಗಿರಲಿದೆ. ಭಾರತದ ಭವಿಷ್ಯದ ಬಗ್ಗೆ ಅನುಮಾನವಿರುವವರು ಒಮ್ಮೆ ಬೆಂಗಳೂರಿಗೆ ಬಂದು ಇಲ್ಲಿನ ಐಟಿ, ಸ್ಟಾರ್ಟಪ್ ಮತ್ತು ಇನ್ನಿತರ ಕ್ರಾಂತಿಕಾರಕ ಸಂಶೋಧನೆಗಳನ್ನು ನೋಡಿದರೆ, ಅವರ ಸಂಶಯಗಳೆಲ್ಲ ನಿವಾರಣೆಯಾಗಿ ಹೋಗುತ್ತವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಈ ಮೆಚ್ಚುಗೆಯ ಮಾತು ಮತ್ತು ಅದಮ್ಯ ಭರವಸೆಯ ಮೂಲಕ ಅವರು ಮಂಗಳವಾರ ಇಲ್ಲಿ `ಜಾಗತಿಕ ಹೂಡಿಕೆದಾರರ ಸಮಾವೇಶ’ವಾದ ಇನ್ವೆಸ್ಟ್ ಕರ್ನಾಟಕ-2025ಕ್ಕೆ ಚಾಲನೆ ನೀಡಿದರು. ಫೆ.14ರವರೆಗೆ ನಡೆಯಲಿರುವ ಸಮಾವೇಶದಲ್ಲಿ ಜಗತ್ತಿನ ನಾನಾ ಭಾಗಗಳ 5,000ಕ್ಕೂ ಹೆಚ್ಚು ಉದ್ಯಮ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.

ಕರ್ನಾಟಕವು ಜ್ಞಾನ ಮತ್ತು ಸಂಪತ್ತು ಎರಡೂ ಮೇಳೈಸಿರುವ ರಾಜ್ಯವಾಗಿದೆ. ದೇಶದ ತಂತ್ರಜ್ಞಾನ ರಾಜಧಾನಿಯಾಗಿರುವ ಬೆಂಗಳೂರು ವೈಮಾಂತರಿಕ್ಷ, ಕೃತಕ ಬುದ್ಧಿಮತ್ತೆ, ಪ್ರತಿಭೆ ಮತ್ತು ಯುವಜನರ ಆಗರವಾಗಿದೆ. ಇಲ್ಲಿರುವ ಶಕ್ತಿ, ಮಹತ್ತ್ವಾಕಾಂಕ್ಷೆ ಮತ್ತು ಇಲ್ಲಿ ನಡೆಯುತ್ತಿರುವ ನಿರ್ಣಾಯಕ ಕೆಲಸಗಳು ದೇಶವನ್ನು ಎತ್ತರಕ್ಕೆ ಕೊಂಡೊಯ್ಯುತ್ತಿವೆ. ಇಲ್ಲಿಂದ ಸದ್ಯದಲ್ಲೇ ಕೃತಕ ಬುದ್ಧಿಮತ್ತೆ ಕ್ಷೇತ್ರದ ಪ್ರಪ್ರಥಮ ಮಾದರಿ ಕೂಡ ಹೊರಬರಲಿದೆ . ಇದಕ್ಕೆಲ್ಲ ಇಲ್ಲಿರುವ ಮಾನವ ಸಂಪನ್ಮೂಲ ಮತ್ತು ಸನ್ನದ್ಧವಾಗಿರುವ ಪ್ರತಿಭೆಯೇ ಕಾರಣ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾರುಕಟ್ಟೆ ಆಧರಿತ ಆರ್ಥಿಕತೆ ಮಾತ್ರ ಸುಸ್ಥಿರ ಆರ್ಥಿಕತೆಯನ್ನು ಸೃಷ್ಟಿಸಬಲ್ಲದು. ಇದು ಸಾಧ್ಯವಾಗಬೇಕೆಂದರೆ ಖಾಸಗಿ ಉದ್ಯಮಿಗಳು ಬಹಳ ಮುಖ್ಯ. ಹಿಂದೆ ಹೂಡಿಕೆದಾರರಿಗೆ ಕೆಂಪುಪಟ್ಟಿಯ ತೊಂದರೆ ಎದುರಾಗುತ್ತಿತ್ತು, ಆದರೆ ಈಗ ರತ್ನಗಂಬಳಿಯ ಸ್ವಾಗತ ಸಿಗುತ್ತಿದೆ. ಭಾರತವು ಜಗತ್ತಿನ ಅತಿದೊಡ್ಡ ಮಾರುಕಟ್ಟೆಯಾಗಿ ಬೆಳೆಯುತ್ತಿದೆ. ಇದಕ್ಕೆ ತಕ್ಕಂತೆ ಸರಕಾರದಿಂದ ಪ್ರಮುಖ ನಿರ್ಧಾರಗಳೂ ಹೊರಬರುತ್ತಿವೆ. ಬೆಂಗಳೂರಿನ ನಿರ್ಣಾಯಕ ಪಾತ್ರದಿಂದ ಭಾರತವು ವೈಮಾಂತರಿಕ್ಷ ಕ್ಷೇತ್ರದಲ್ಲೂ ಅಸಾಧಾರಣ ಸಾಧನೆಗಳನ್ನು ಮಾಡುತ್ತಿದೆ ಎಂದು ರಾಜನಾಥ್ ಶ್ಲಾಘಿಸಿದ್ದಾರೆ.

Ads in Post

Author:

...
Nanje Gowda SS

Administrator

I'm a dedicated news author with a passion for storytelling and a commitment to uncovering the truth. With more than 5 years of experience in journalism, I’ve covered a wide range of topics, from local stories that shape our communities to global events that impact the world at large.

No Reviews