ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ ಬನಶಂಕರಿ 2ನೇ ಹಂತದ ಬಡಾವಣೆಯಲ್ಲಿ ₹ 35 ಕೋಟಿ ಮೌಲ್ಯದ, ಸಾರ್ವಜನಿಕ ಬಳಕೆಗೆ ಮೀಸಲಿರಿಸಿದ ಜಾಗ (ಸಿಎ) ವಶಪಡಿಸಿಕೊಂಡಿದೆ. ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ ಹೋಬಳಿಯ ಕತ್ರಿಗುಪ್ಪೆ ಗ್ರಾಮದ ಸರ್ವೆ ನಂ.15/1ರಲ್ಲಿನ 19 ಗುಂಟೆ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್ಗಳು, ಗ್ಯಾರೇಜ್, ಗುಜರಿ ಅಂಗಡಿ, ದೇವಸ್ಥಾನವನ್ನು ಜೆಸಿಬಿ ಬಳಸಿ ತೆರವು ಮಾಡಲಾಯಿತು.
'ಈ ಜಾಗದ ಸಂಬಂಧ ಭೂಮಿ ಮಾಲೀಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇತ್ತೀಚೆಗೆ ಬಿಡಿಎ ಪರವಾಗಿ ಆದೇಶ ಬಂದಿದ್ದು, ಒತ್ತುವರಿ ತೆರವಿಗೆ ನೋಟಿಸ್ ನೀಡಲಾಗಿತ್ತು. ಕಾರ್ಯಾಚರಣೆ ನಡೆಸಿ, ಶೆಡ್, ಗ್ಯಾರೆಜ್, ಗುಜರಿ ಅಂಗಡಿ ನೆಲಸಮಗೊಳಿಸಲಾಯಿತು. ಗುಜರಿಗೆ ಸೇರಿದ 22 ವಾಹನಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಯಿತು' ಎಂದು ದಕ್ಷಿಣ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಕೃಷ್ಣಕುಮಾರ್ ತಿಳಿಸಿದರು.ಪ್ರಾಧಿಕಾರದ ಕಾರ್ಯನಿರತ ಪಡೆಯ ಎಸ್ಪಿ, ದಕ್ಷಿಣ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಸಿಬ್ಬಂದಿ ಹಾಗೂ ಸ್ಥಳೀಯ ಠಾಣೆಯ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.