ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ 2ಎ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಪಂಚಮಸಾಲಿ ಹೋರಾಟಗಾರರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿರುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಂದ ಮಾಹಿತಿ ಪಡೆದಿದ್ದಾರೆ. ಲಾಠಿ ಚಾರ್ಜ್ ಕುರಿತು ಸಂಪೂರ್ಣ ಮಾಹಿತಿ ಪಡೆದ ಸಿಎಂ ಸಿದ್ದರಾಮಯ್ಯ, ನೀವು ಮಾಡಿದ್ದು ಸರಿ ಇದೆ ಎಂದಿದ್ದಾರೆ.ಲಾಠಿಚಾರ್ಜ್ ಮತ್ತು ಪ್ರತಿಭಟನೆ ಕುರಿತು ಡಿಸಿ ಮೊಹಮ್ಮದ್ ರೋಷನ್ ಸಿದ್ದರಾಮಯ್ಯನವರಿಗೆ ಮಾಹಿತಿ ನೀಡಿದರು. ಇದೇ ವೇಳೆ, ಸಿಎಂ ಸಿದ್ದರಾಮಯ್ಯ ಗಲಾಟೆಯ ಸಂಪೂರ್ಣ ವಿಡಿಯೋ ವೀಕ್ಷಣೆ ಮಾಡಿದರು. ಪ್ರತಿಭಟನೆ ವೇಳೆ ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡಿದ್ದಾರೆ ಎಂದು ಆದೇಶ ಪ್ರತಿ ಸಮೇತ ಸಿದ್ದರಾಮಯ್ಯಗೆ ವಿವರಣೆ ನೀಡಲಾಯಿತು. ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಅನ್ನು ಗೃಹ ಸಚಿವ ಡಾ. ಜಿ ಪರಮೇಶ್ವರ ಸಮರ್ಥಿಸಿಕೊಂಡಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸುಮ್ಮನೆ ನಾವು ಲಾಠಿಚಾರ್ಜ್ ಮಾಡಿಲ್ಲ. ಇದಕ್ಕೆ ಸಂಬಂಧಿಸಿ ನಮ್ಮ ಬಳಿಯೂ ವಿಡಿಯೋ ಹಾಗೂ ಫೋಟೋಗಳಿವೆ. ಪಂಚಮಸಾಲಿ ಹೋರಾಟಗಾರರು ಕಾನೂನು ಕೈಗೆತ್ತಿಕೊಂಡಿದ್ದರು. ಸ್ವತಃ ಸಿಎಂ ಹೋರಾಟ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು. ನಾವು ಸಚಿವರನ್ನು ಪ್ರತಿಭಟನೆ ಸ್ಥಳಕ್ಕೆ ಕಳುಹಿಸಿದಾಗಲೂ ಒಪ್ಪಲಿಲ್ಲ ಎಂದು ಹೇಳಿದ್ದಾರೆ.