ಬೆಂಗಳೂರು : ಯಡಿಯೂರಪ್ಪ ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಬಹಳ ಸಂಭ್ರಮದಿಂದ ಅವರ ಜನ್ಮದಿನವನ್ನು ರಾಜ್ಯದೆಲ್ಲೆಡೆ ಆಚರಣೆ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.
ಇಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇವತ್ತು ಅಪ್ರತಿಮ ಹೋರಾಟಗಾರ, ಧೀಮಂತ ನಾಯಕ, ನಾಡಿನ ಮಾಜಿ ಮುಖ್ಯಮಂತ್ರಿಗಳು, ನನ್ನ ಪೂಜ್ಯ ತಂದೆಯವರಾದ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನ. ತಾಲ್ಲೂಕು ಕೇಂದ್ರಗಳು, ಜಿಲ್ಲಾ ಕೇಂದ್ರಗಳಲ್ಲಿ ಆಸ್ಪತ್ರೆಗಳಿಗೆ ಭೇಟಿ ಕೊಟ್ಟು ಅಲ್ಲಿ ಹಣ್ಣು ಹಂಚುವ ಕಾರ್ಯ ನೆರವೇರಿಸುತ್ತಿದ್ದಾರೆ. ದೇವಸ್ಥಾನಗಳಲ್ಲಿ ಪೂಜೆ ನೆರವೇರಿಸುತ್ತಿದ್ದಾರೆ ಎಂದು ವಿವರಿಸಿದರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ಭಾಗ್ಯಲಕ್ಷ್ಮೀ ಯೋಜನೆ, ಬೈಸಿಕಲ್ ಯೋಜನೆಗಳನ್ನು ಜಾರಿಗೊಳಿಸಿದ್ದರು. ಆ ಫಲಾನುಭವಿಗಳನ್ನು ನಮ್ಮ ಕಾರ್ಯಕರ್ತರು ಭೇಟಿ ಮಾಡುತ್ತಿದ್ದಾರೆ. ಯಡಿಯೂರಪ್ಪನವರ ಜನ್ಮದಿನವನ್ನು ಸರಳವಾಗಿ ಮತ್ತು ಅಭಿಮಾನದಿಂದ ಕಾರ್ಯಕರ್ತರು ರಾಜ್ಯಾದ್ಯಂತ ಆಚರಿಸುತ್ತಿದ್ದಾರೆ ಎಂದು ವಿವರಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಡೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಐತಿಹಾಸಿಕ ಕುಂಭಮೇಳ ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ; ಜಗತ್ತಿನ ವಿವಿಧ ದೇಶಗಳಿಂದ ಕುಂಭಮೇಳದಲ್ಲಿ ಭಾಗವಹಿಸಿದ್ದಾರೆ. ಸುಮಾರು 65 ಕೋಟಿಗೂ ಹೆಚ್ಚು ಭಕ್ತಾದಿಗಳು, ಹಿಂದೂಗಳು ಬಂದು ಹೋಗಿದ್ದಾರೆ ಎಂದು ತಿಳಿಸಿದರು.
ಪ್ರಯಾಗ್‍ರಾಜ್‍ನಲ್ಲಿ ಪ್ರಸಿದ್ಧ ಕುಂಭ ಮೇಳ ಮುಕ್ತಾಯವಾಗಿದ್ದು, ಅದು ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾದ ಕಾರ್ಯಕ್ರಮವಲ್ಲ ಎಂದು ನುಡಿದರು. ಹಿಂದುತ್ವ, ಪ್ರಾಚೀನ ಪರಂಪರೆ, ಸಂಸ್ಕøತಿ ಬಗ್ಗೆ ವಿಶ್ವಾಸ ಇಟ್ಟುಕೊಂಡವರು ಕುಂಭಮೇಳದಲ್ಲಿ ಭಾಗವಹಿಸಿದ್ದಾರೆ ಎಂದು ವಿವರಿಸಿದರು.
ಇಶಾ ಫೌಂಡೇಶನ್ ಧಾರ್ಮಿಕ ಕಾರ್ಯಕ್ರಮ ನಡೆಸಿದೆ. ಶಿವರಾತ್ರಿ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರು ಅಲ್ಲಿ ಹೋಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ದಿನೇದಿನೇ ಒಳಜಗಳ ಜಾಸ್ತಿ ಆಗುತ್ತಿದೆ. ಮುಂದಿನ ದಿನಗಳಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ಆಗಲಿದೆ ಎಂದು ನಾನು ಈ ಹಿಂದೆಯೇ ಹೇಳಿದ್ದೆ ಎಂದರು.
ಸಿಎಂ ಭೇಟಿ ಕುರಿತಂತೆ ಪ್ರಶ್ನೆಗೆ ಉತ್ತರ ನೀಡಿದ ಅವರು, ಮೊನ್ನೆ ಬೆಂಗಳೂರು ನಗರದ ನಮ್ಮ ಶಾಸಕರು, ಸಂಸದರು ಚರ್ಚೆ ಮಾಡಿದ್ದೇವೆ. ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರು ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ನೀಡಿದ್ದರು. ಅವೆಲ್ಲವುಗಳಿಗೆ ತಡೆ ಆಗುತ್ತಿದೆ. ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೊಡಿ ಎಂಬ ಕೂಗು ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಎಲ್ಲ ಶಾಸಕರದ್ದಾಗಿದೆ. ಗ್ರೇಟರ್ ಬೆಂಗಳೂರು ಯೋಜನೆ ಕೈಬಿಟ್ಟು ಬಿಬಿಎಂಪಿ ಚುನಾವಣೆ ನಡೆಸಬೇಕೆಂಬ ಆಗ್ರಹ ಎಲ್ಲರದು. ಬೆಂಗಳೂರು ಒಳಗೊಂಡು ಅಭಿವೃದ್ಧಿ ಕಾರ್ಯ ಎಲ್ಲ ಕಡೆ ನಡೆಯಬೇಕು ಎಂಬ ನಿಟ್ಟಿನಲ್ಲಿ ನಮ್ಮ ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ನೀಡಲಿದ್ದೇವೆ ಎಂದು ತಿಳಿಸಿದರು.

Ads in Post

Author:

...
Nanje Gowda SS

Administrator

I'm a dedicated news author with a passion for storytelling and a commitment to uncovering the truth. With more than 5 years of experience in journalism, I’ve covered a wide range of topics, from local stories that shape our communities to global events that impact the world at large.

No Reviews