ಸುವರ್ಣ ವಿಧಾನಸೌಧ ಆವರಣದಲ್ಲಿ ಮಹಾತ್ಮಾ ಗಾಂಧೀಜಿ ಬೃಹತ್ ಪುತ್ಥಳಿ ಅನಾವರಣ

ಬೆಳಗಾವಿ : ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ ಜರುಗಿದ ಕಾಂಗ್ರೆಸ್ ಅಧೀವೇಶನದ ಶತಮಾನೋತ್ಸವದ ಸವಿನೆನಪಿಗಾಗಿ‌ ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಮಹಾತ್ಮಾ ಗಾಂಧೀಜಿಯವರ ಬೃಹತ್ ಪುತ್ಥಳಿಯನ್ನು ಚರಕವನ್ಮು ತಿರುಗಿಸುವ ಮೂಲಕ ಅನಾವರಣಗೊಳಿಸಿದರು.

ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಮಲ್ಲಿಕಾರ್ಜುನ‌ ಖರ್ಗೆ ಅವರು, ಬೆಳಗಾವಿ ಸುವರ್ಣ ವಿಧಾನಸೌಧದ ಎದುರು ಗಾಂಧೀಜಿಯವರ ಪುತ್ಥಳಿಯ ಸ್ಥಾಪನೆಯಿಂದ ಈ ಭಾಗಕ್ಕೆ ಮಾತ್ರವಲ್ಲ; ಇಡೀ‌ ಕರ್ನಾಟಕಕ್ಕೆ‌ ಗೌರವ ತಂದಿದೆ ಎಂದು ಅಭಿಪ್ರಾಯಪಟ್ಟರು.

ಸಂವಿಧಾನ ಹಾಗೂ ಪ್ರಜಾತಂತ್ರ ಇಲ್ಲದಿದ್ದರೆ‌ ದೇಶದಲ್ಲಿ ಅರಾಜಕತೆ ಉಂಟಾಗುತ್ತಿತ್ತು. ಗಾಂಧೀಜಿವರು ದೇಶಕ್ಕೆ ನೀಡಿದ ಕೊಡುಗೆಯನ್ನು‌ ಈಗ ಎಲ್ಲರೂ ಸ್ಮರಿಸುತ್ತಿದ್ದಾರೆ. ಗಾಂಧೀಜಿಯವರು ತಮ್ಮ ಅಧ್ಯಕ್ಷತೆಯಲ್ಲಿ 1924 ರಲ್ಲಿ‌ ಜರುಗಿದ‌ ಅಧಿವೇಶನದಲ್ಲಿ ಅಸ್ಪೃಶ್ಯತೆ‌ ನಿವಾರಣೆಗೆ ಕರೆ‌ ನೀಡಿದರು. ಆದ್ದರಿಂದ ಈ‌ ನೆಲ‌ವು ಐತಿಹಾಸಿಕ‌ ಮಹತ್ವವನ್ನು ಹೊಂದಿದೆ.

1924 ರಲ್ಲಿ ಕಾಂಗ್ರೆಸ್ ಅಧಿವೇಶನ‌ ನಡೆದ ಸ್ಥಳದಲ್ಲಿಯೇ ನೂರು ವರ್ಷದ ಬಳಿಕ ಪಕ್ಷದ ಕಾರ್ಯಕಾರಿಣಿ ಸಭೆ‌‌ ನಡೆಸಿರುವುದು ಅತ್ಯಂತ‌ ಮಹತ್ವದ್ದಾಗಿದೆ. ಗುಲ್ಬರ್ಗದಲ್ಲೂ ಕೂಡ‌ ಮಹಾತ್ಮಾ‌ಗಾಂಧೀಜಿಯವರ ವಿಶೇಷ ಪುತ್ಥಳಿಯನ್ನು ಸ್ಥಾಪಿಸಲಾಗುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಗಾಂಧೀಜಿಯವರು 1924 ರಲ್ಲಿ‌ ಕಾಂಗ್ರೆಸ್‌ ನ ಐತಿಹಾಸಿಕ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕದಲ್ಲಿ ಅದರಲ್ಲೂ ಬೆಳಗಾವಿಯಲ್ಲಿ ನಡೆದಿರುವುದು ನಮಗೆಲ್ಲ ಹೆಮ್ಮೆಯ‌ ಸಂಗತಿ ಎಂದರು.

ಮಹಾತ್ಮಾ ಗಾಂಧೀಜಿಯವರು ಅಂದು ಅಸ್ಪೃಶ್ಯತೆ ನಿವಾರಣೆ, ಸಮಾನತೆ, ಗ್ರಾಮೀಣಾಭಿವೃದ್ಧಿ, ಮಹಿಳಾ ಸಬಲೀಕರಣ ಕುರಿತು ಪ್ರತಿಪಾದನೆ ಮಾಡಿದ್ದರು. ಗಾಂಧೀಜಿಯವರು ಸದಾ‌ ಶ್ರೀರಾಮನ ಸ್ಮರಣೆ‌‌ಮಾಡುತ್ತಿದ್ದರು. ಅವರು‌ ಅಪ್ಪಟ‌ ಹಿಂದೂ ಎಂಬುದಕ್ಕೆ‌ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ. ಅವರು ಎಂದೂ ಹಿಂದೂ ವಿರೋಧಿಯಾಗಿರಲಿಲ್ಲ; ಆದರೆ ಹಿಂದೂ‌ ಧರ್ಮದಲ್ಲಿ ಸಮಾನತೆ‌ ಮತ್ತು‌ ಸಹೋದರತೆಯನ್ನು ಬಯಸಿದ್ದರು. "ಹೇ ರಾಮ್‌" ಎನ್ನುತ್ತಲೇ ಕೊನೆಯುಸಿರೆಳೆದರು. ಅಂತಹ ಮಹಾನ್ ವ್ಯಕ್ತಿಯ ಬಗ್ಗೆ ತಪ್ಪು ಮಾಹಿತಿ ಹರಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೂಡ ಮಹಾತ್ಮಾ‌ ಗಾಂಧೀಜಿಯವರ ತತ್ವಗಳನ್ನು ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಸಂವಿಧಾನ‌ ದುರ್ಬಲಗೊಳಿಸುವ ಪ್ರಯತ್ನ ನಿರಂತರವಾಗಿ‌ ನಡೆದಿದೆ. ಅದಕ್ಕೆ‌ ನಾವು ಆಸ್ಪದ ನೀಡಬಾರದು. ಇಂದಿನ ಯುವಜನತೆಗೆ ಹಾಗೂ ಮುಂದಿನ ಪೀಳಿಗೆಗೆ ಗಾಂಧೀಜಿಯವರ ವಿಚಾರಧಾರೆಯನ್ನು ತಲುಪಿಸುವ ಉದ್ಧೇಶದಿಂದ ಪುತ್ಥಳಿಯನ್ನು ಸ್ಥಾಪಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಿಧಾನ ಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು, "ಇದೊಂದು‌ ಐತಿಹಾಸಿಕ‌ ಕಾರ್ಯಕ್ರಮ; ಇದು ಕೇವಲ ಪುತ್ಥಳಿ ಅನಾವರಣ ಕಾರ್ಯಕ್ರಮ ಮಾತ್ರವಲ್ಲ. ಸ್ವಾತಂತ್ರ್ಯ ಯೋಧರಿಗೆ ಗೌರವಿಸುವ ಮತ್ತು ಸಂವಿಧಾನದ ಘನತೆ ಎತ್ತಿ ಹಿಡಿಯುವ ಪವಿತ್ರ ಕಾರ್ಯಕ್ರಮವಾಗಿದೆ" ಎಂದು ಅಭಿಪ್ರಾಯಪಟ್ಟರು.

ಏಕೀಕರಣ ಕೂಡ‌ ಗಾಂಧಿಜಿಯವರ ಪ್ರೇರಣೆ ದೊರೆತಿದೆ. ಏಕತೆ, ಸಮಾನತೆ‌ಕಾಪಾಡಿಕೊಂಡು ಗಾಂಧೀಜಿಯವರ ತತ್ವಾದರ್ಶಗಳನ್ನು ಪುನರ್ ಮನನ ಮಾಡಲು ಇದು ಸ್ಫೂರ್ತಿದಾಯಕವಾಗಿದೆ. ಗಾಂಧೀಜಿಯವರ ತತ್ವಗಳನ್ನು ಬದಿಗಿಟ್ಟು ಸದೃಢ ಭಾರತ ನಿರ್ಮಾಣ ಅಸಾಧ್ಯ. ಆದ್ದರಿಂದ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಎಲ್ಲರೂ ಒಗ್ಗೂಡಿಕೊಂಡು ಮುನ್ನಡೆಯಬೇಕಿದೆ. ರಾಮರಾಜ್ಯ‌ ಮತ್ತು ಗ್ರಾಮರಾಜ್ಯ ಮಹಾತ್ಮಾ ಗಾಂಧೀಜಿಯವರ ಕನಸಾಗಿತ್ತು. ಪರಸ್ಪರ ಸಹೋದರತೆ, ತ್ಯಾಗ, ಪತ್ನಿಯ ತ್ಯಾಗವು ರಾಮರಾಜ್ಯದ‌ ನೈಜ ಪರಿಕಲ್ಪನೆಯಾಗಿದೆ ಎಂದು ಸಭಾಧ್ಯಕ್ಷರಾದ ಯು.ಟಿ.ಖಾದರ್ ಹೇಳಿದರು.

ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಕಾನೂನು, ಸಂಸದೀಯ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಎಚ್.ಕೆ.ಪಾಟೀಲ ಅವರು, ಮಹಾತ್ಮಾ ಗಾಂಧೀಜಿಯ ಪ್ರತಿಮೆ‌ ಅನಾವರಣ ಒಂದು ಅವಿಸ್ಮರಣೀಯ ಗಳಿಗೆಯಾಗಿದೆ. ವಿಗ್ರಹವಲ್ಲ ಚೈತನ್ಯದ ಹರವು ಎಂದು ಬಣ್ಣಿಸಿದ ಅವರು, ಪ್ರತಿಮೆಯು ಗಾಂಧೀಜಿ ಅನುಯಾಯಿಗಳಿಗೆ ಪ್ರೇರಣೆಯಾಗಲಿದೆ. ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆ ವಹಿಸಿದ್ದ 1924 ರ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವವು ಗಾಂಧಿ ಭಾರತಕ್ಕೆ ದಾರಿದೀಪವಾಗಲಿದೆ ಎಂದರು.

ಕರ್ನಾಟಕ ವಿಧಾನಪರಿಷತ್ತಿನ ಸಭಾಪತಿಯವರಾದ ಬಸವರಾಜ ಹೊರಟ್ಟಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವರಾದ ಜಿ.ಪರಮೇಶ್ವರ್, ಲೋಕೋಪಯೋಗಿ ಇಲಾಖೆ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಉಪ ಸಭಾಧ್ಯಕ್ಷರಾದ ರುದ್ರಪ್ಪ ಲಮಾಣಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ಕೆ.ಸಿ. ವೇಣುಗೋಪಾಲ್, ರಂದೀಪ್ ಸಿಂಗ್ ಸುರ್ಜೇವಾಲಾ, ಜೈರಾಮ್ ರಮೇಶ್ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಗ್ರಾಮೀಣ ವಿವಿಗೆ "ಮಹಾತ್ಮಾ‌ ಗಾಂಧೀಜಿ" ಹೆಸರು ನಾಮಕರಣ:

ಗದುಗಿನ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಯಲಯವನ್ನು "ಮಹಾತ್ಮಾ ಗಾಂಧೀಜಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ವಿಶ್ವವಿದ್ಯಾಲಯ" ಎಂದು ಮರುನಾಮಕರಣ‌ ಮಾಡುವುದರ ಜತೆಗೆ ನೂತನ ಲಾಂಛನವನ್ನು ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.

ವಿಶೇಷ ಅಂಚೆ ಚೀಟಿ-ಕೃತಿಗಳ ಬಿಡುಗಡೆ

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಸವಿನೆನಪಿಗಾಗಿ ಗಾಂಧೀ ಭಾರತ ವಿಶೇಷ ಅಂಚೆ ಲಕೋಟೆಯನ್ನು ಕೂಡ ಬಿಡುಗಡೆಗೊಳಿಸಲಾಯಿತು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಹೊರತರಲಾದ "ಗಾಂಧಿ‌ ಭಾರತ-ಮರುನಿರ್ಮಾಣ" ಪುಸ್ತಕ ಗಣ್ಯರು ಬಿಡುಗಡೆಗೊಳಿಸಿದರು.

ಕರ್ನಾಟಕ ಏಕೀಕರಣ ಚಳವಳಿಗೆ ಪ್ರೇರಣೆಯಾಗಿದ್ದ ಹುಯಿಲಗೋಳ ನಾರಾಯಣರಾವ್ ಅವರು ರಚಿಸಿದ " ಉದಯವಾಗಲಿ ನಮ್ಮ ಚೆಲುವು ಕನ್ನಡ‌ ನಾಡು" ಗೀತೆಯನ್ನು ಸಾದ್ವಿನಿ ಕೊಪ್ಪ ಅವರು ಪ್ರಸ್ತುತಪಡಿಸಿದರು.

ಬಾನಂಗಳಕ್ಕೆ ಚಿಮ್ಮಿದ ರಂಗು

ಚರಕವನ್ನು ತಿರುಗಿಸುವ ಮೂಲಕ ಮಹಾತ್ಮಾ‌ಗಾಂಧೀಜಿಯವರ ಪ್ರತಿಮೆ‌ ಅನಾವರಣಗೊಳಿಸಿದ ಕೂಡಲೇ‌ ಬಾನಂಗಳಕ್ಕೆ ಚಿಮ್ಮಿದ ಬಣ್ಣದ ಚಿತ್ತಾರ‌ ಮೂಡಿಸಿ, ಚಿತ್ತಾಕರ್ಷಕ ಕಾಮನಬಿಲ್ಲಿನ ವರ್ಣಗಳನ್ನು ಅರಳಿಸಿ, ಪಟಾಕಿ ಹಾರಿಸಿದ್ದು ಕಾರ್ಯಕ್ರಮದ ಮೆರುಗು ಹೆಚ್ಚಿಸಿತು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ‌ ಪರವಾಗಿ ಅತಿಥಿಗಳನ್ನು ಸನ್ಮಾನಿಸಿ, ಗೌರವಿಸಿದರು.

ಲೋಕೋಪಯೋಗಿ ಇಲಾಖೆ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ವಂದಿಸಿದರು. ಬಿ.ಸಿ.ಭಾನುಮತಿ ಕಾರ್ಯಕ್ರಮವನ್ನು ನಿರೂಪಿಸಿದರು.

ಕರ್ನಾಟಕ ರಾಜ್ಯದ ಎಲ್ಲ ಸಚಿವರು, ಶಾಸಕರು, ಅನೇಕ‌ ಸಂಸದರು, ಮಾಜಿ ಶಾಸಕರು ಸೇರಿದಂತೆ ಅನೇಕ ಗಣ್ಯರು, ತೆಲಂಗಾಣದ ಜನಪ್ರತಿನಿಧಿಗಳು ಕೂಡ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Ads in Post

Author:

...
Nanje Gowda SS

Administrator

I'm a dedicated news author with a passion for storytelling and a commitment to uncovering the truth. With more than 5 years of experience in journalism, I’ve covered a wide range of topics, from local stories that shape our communities to global events that impact the world at large.

No Reviews